ಮೈಸೂರು : ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮಾಡುವ ಗಜಪಡೆಗೆ ಬುಧವಾರ ಸಂಜೆ ಭಾರ ಹೊರುವ ತಾಲೀಮನ್ನು ನಡೆಸಲಾಯಿತು. ಅರಮನೆ ಒಳಗಿನ ಕೋಡಿ ಸೋಮೇಶ್ವರ ದೇವಾಲಯದ ಬಳಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಕ್ಯಾಪ್ಟನ್ ಅಭಿಮನ್ಯು ಆನೆಗೆ ಭಾರ ಹೊರುವ ತಾಲೀಮನ್ನು ಆರಂಭಿಸಲಾಗಿದೆ.
ಈಗಾಗಲೇ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 14 ಗಜಪಡೆ ಎರಡು ಹಂತದಲ್ಲಿ ಆಗಮಿಸಿ ತಾಲೀಮು ಹಾಗೂ ಪೌಷ್ಟಿಕ ಆಹಾರದ ಜೊತೆಗೆ ಅರಮನೆಯ ವಾತಾವರಣಕ್ಕೆ ಹೊಂದಿಕೊಂಡಿವೆ. ಪ್ರತಿನಿತ್ಯ ಬೆಳಗ್ಗೆ ಹಾಗೂ ಸಂಜೆ ಅರಮನೆಯಿಂದ ಜಂಬೂಸವಾರಿ ಸಾಗುವ ಮಾರ್ಗದಲ್ಲಿ ತಾಲೀಮು ನಡೆಸಲಾಗುತ್ತಿದೆ. ಇದರ ಎರಡನೇ ಹಂತವಾಗಿ ಬುಧವಾರ(ಸೆ.3) ಗಜಪಡೆಯ ಕ್ಯಾಪ್ಟನ್ ಅಭಿಮನ್ಯುವಿಗೆ ಚಿನ್ನದ ಅಂಬಾರಿ ಹೊರುವುದಕ್ಕಾಗಿ ನಡೆಸುವ ತಾಲೀಮು ಮರಳು ಮೂಟೆ ಹೊರುವುದನ್ನು ನಡೆಸಲಾಯಿತು.
ಇದನ್ನು ಓದಿ: ದಸರಾ ಉದ್ಘಾಟನೆ | ಬಾನು ಮುಷ್ತಾಕ್‌ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ
ಮೊದಲ ದಿನ 500 ಕೆ.ಜಿ ತೂಕದ ಭಾರ
ಅಭಿಮನ್ಯು ಆನೆಗೆ 200 ಕೆ.ಜಿ ತೂಕದ ಗಾದಿ, ನಮ್ದ, ಚಾರ್ಮ ಹಾಗೂ 300 ಕೆ.ಜಿ ತೂಕದಷ್ಟು ಮರಳಿನ ಮೂಟೆಯನ್ನು ಹಾಕಿ ಸುಮಾರು 500 ಕೆ.ಜಿ ಭಾರವನ್ನು ಅಭಿಮನ್ಯು ಆನೆ ಹೊತ್ತುಕೊಂಡು ಸಾಗಿತು. ಅಭಿಮನ್ಯು ಪಕ್ಕ ಕುಮ್ಕಿ ಆನೆಯಾಗಿ ಕಾವೇರಿ ಹಾಗೂ ಹೇಮಾವತಿ ಸಾಥ್ ನೀಡಿದವು. ಮುಂದಿನ ದಿನಗಳಲ್ಲಿ ಮಹೇಂದ್ರ, ಧನಂಜಯ, ಭೀಮ ಹಾಗೂ ಏಕಲವ್ಯ ಆನೆಗಳಿಗೂ ಭಾರ ಹೊರುವ ತಾಲೀಮನ್ನು ನಡೆಸಲಾಗುವುದು. ಈಗಾಗಲೇ 14 ಆನೆಗಳು ತಾಲೀಮಿನಲ್ಲಿ ಭಾಗವಹಿಸಿದ್ದು, ಮುಂದಿನ ದಿನಗಳಲ್ಲಿ ಭಾರ ಹೊರುವ ತಾಲೀಮಿನ ಜೊತೆಗೆ ಮರದ ಅಂಬಾರಿ ಹೊರುವ ತಾಲೀಮನ್ನು ನಡೆಸಲಾಗುವುದು ಎಂದು ಡಿಸಿಎಫ್ ಪ್ರಭುಗೌಡ ಮಾಹಿತಿ ನೀಡಿದರು.
ಭಾರ ಹೊತ್ತು ಸಾಗಿದ ಅಭಿಮನ್ಯು
ಕಳೆದ ಐದು ವರ್ಷಗಳಿಂದ ಸುಮಾರು 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಸಾಗುತ್ತಿರುವ ಅಭಿಮನ್ಯು ಆನೆ 500 ಕೆ.ಜಿ ತೂಕದ ಮರಳಿನ ಮೂಟೆ ಹಾಗೂ ಇತರ ವಸ್ತುಗಳನ್ನು ಹೊತ್ತು ಅರಮನೆಯ ಬಲರಾಮ ದ್ವಾರದ ಮೂಲಕ ಹೊರಟು ಜಂಬೂಸವಾರಿ ಸಾಗುವ ಮಾರ್ಗವಾದ ಕೆ.ಆರ್.ವೃತ್ತ, ಸಯ್ಯಾಜಿರಾವ್ ವೃತ್ತ, ಆಯುರ್ವೇದಿಕ್ ಆಸ್ಪತ್ರೆ, ಹಳೆಯ ಆರ್.ಎಂ.ಸಿ ವೃತ್ತ, ಹೈವೇ ವೃತ್ತ ಮಾರ್ಗವಾಗಿ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದವರೆಗೆ ಸಾಗಿತು. ಪುನಃ ಅದೇ ಮಾರ್ಗವಾಗಿ ವಾಪಸ್ ಅರಮನೆಗೆ ಗಜಪಡೆ ಬಂದಿತು. ಈ ಮೂಲಕ ಮೊದಲ ದಿನದ ಭಾರ ಹೊರುವ ತಾಲೀಮು ಯಶಸ್ವಿಯಾಗಿ ನಡೆಯಿತು.





