Mysore
19
overcast clouds
Light
Dark

ತಲಕಾಡಿನಲ್ಲಿ ಚಿರತೆ ಹೆಜ್ಜೆಗುರುತು ಪತ್ತೆ

ಟಿ.ನರಸಿಪುರ : ಅರುಂಧತಿ ನಗರದ ಊರ ಒತ್ತಿನ ಜಮೀನಿಲ್ಲಿ ಚಿರತೆ ಹೆಜ್ಜೆ ಗುರುತು ಕಾಣಿಸಿ ಕೊಂಡಿದ್ದು ಜನ ಭಯ ಭೀತರಾಗಿದ್ದಾರೆ.

ಇಲ್ಲಿನ ರೈತ ಸಂಪರ್ಕ ಕೇಂದ್ರದ ಬಳಿಯ ಸಣ್ಣಪುರಿ ನಾರಾಯಣಿ ರವರ ತೋಟದಲ್ಲಿ ಚಿರತೆ ಓಡಾಡಿದ ಹೆಜ್ಜೆ ಗುರುತು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಇವರು ಮಾಹಿತಿ ನೀಡಿದ್ದಾರೆ.

ನಾರಾಯಣಿ ತೋಟದ ಗೇಟ್ ತಂತಿಬೇಲಿ ನೆಗೆದು ಪಕ್ಕದ ಜಮೀನಿನ ಕಡೆಗೆ ಹೋಗಿರುವ ಹೆಜ್ಜೆ ಗುರುತು ಪರಿಶೀಲಿಸಿದ ಅರಣ್ಯ ಸಿಬ್ಬಂದಿ ಇದು ಚಿರತೆ ಹೆಜ್ಜೆ ಗುರುತೆಂದು ಖಚಿತಪಡಿಸಿದ್ದಾರೆ. ಮುನ್ನೆಚ್ಚರಿಕೆ ವಹಿಸಿ ಚಿರತೆ ಸೆರೆಗೆ ಅರಣ್ಯ ಸಿಬ್ಬಂದಿ ಬೋನು ಇರಿಸಿದ್ದಾರೆ.

ಶನಿವಾರ ಇಲ್ಲಿ ಕಾಣಿಸಿಕೊಂಡ ಚಿರತೆ ಹೆಜ್ಜೆಗುರುತು ಭಾನುವಾರ ಕುಕ್ಕೂರಿನ ಬಳಿ ಪತ್ತೆಯಾಗಿದೆ. ದಿನಾ 30ರಿಂದ 35ಕಿಮೀ ಕ್ರಮಿಸುವ ಚಿರತೆ ಈಗಾಗಲೆ ತಲಕಾಡು ಕುಕ್ಕೂರು, ಮುಡುಕುತೊರೆ, ಬಣವೆ ಕಾವೇರಿಪುರ, ಮೂಡಲಹುಂಡಿ ಹಾಗು ಗಡಿಗ್ರಾಮ ಮಡವಾಡಿ ವ್ಯಾಪ್ತಿಯ ಜಮೀನಿನಲ್ಲಿ ಚಿರತೆ ಓಡಾಡಿಕೊಂಡಿರುವ ಮಾಹಿತಿ ಅರಣ್ಯ ಇಲಾಖೆಗೆ ಲಭ್ಯವಾಗಿದೆ.

ಹೀಗಾಗಿ ತಲಕಾಡು, ಮುಡುಕುತೊರೆ, ಕುಕ್ಕೂರು, ಬಣವೆ ನಾಲ್ಕು ಗ್ರಾಮಗಳ ಸಮೀಪದ ಜಮೀನುಗಳಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆಗೆ ಈಗಾಗಲೆ ನಾಲ್ಕು ಬೋನು ಇರಿಸಲಾಗಿದೆ.

ಇದಲ್ಲದೆ ತಲಕಾಡು ಅರುಂಧತಿ ನಗರದ ಊರೊತ್ತಿನ ಅಕ್ಕಪಕ್ಕದ ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತು ಆಗಾಗ್ಗೆ ಕಾಣಿಸಿ ಕೊಂಡಿರುವ ಹಿನ್ನೆಲೆಯಲ್ಲಿ, ಈ ಭಾಗದ ಜನ ಸಂಜೆ ವೇಳೆಯಲ್ಲಿ ಓಡಾಡಲು ಭಯ ಪಡುತ್ತಿದ್ದಾರೆ.

ಹೋಬಳಿ ಭಾಗದ ಅಲ್ಲಲ್ಲಿ ಆಗಾಗ್ಗೆ ಚಿರತೆ ಕಾಣಿಸಿಕೊಂಡು ಜನ ಭಯದಲ್ಲಿದ್ದಾರೆ. ಹೀಗಾಗಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಕೂಡಲೆ ಅಗತ್ಯ ಕ್ರಮ ಕೈಗೊಂಡು, ಜನತೆಯಲ್ಲಿ ಆವರಿಸಿರುವ ಚಿರತೆ ಭಯ ಹೋಗಲಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ