ಎಚ್.ಡಿ.ಕೋಟೆ: ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ನಾಗರಹೊಳೆಯ ದಮ್ಮನಕಟ್ಟೆ ಸಫಾರಿಯ ವೇಳೆ ಕಬಿನಿ ಹಿನ್ನೀರಿನಲ್ಲಿ ಆನೆಗಳ ಹಿಂಡು ಹಸಿರು ಹುಲ್ಲನ್ನು ತಿನ್ನುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮರಾದಲ್ಲಿ ಸೆರೆಯಾಗಿದೆ.
ಎಚ್.ಡಿ.ಕೋಟೆ ಭಾಗದಲ್ಲಿ ಕಳೆದ ಕೆಲ ದಿನಗಳ ಹಿಂದೆ ಧಾರಾಕಾರ ಮಳೆಯಾಗಿರುವ ಹಿನ್ನೆಲೆಯಲ್ಲಿ ಕಾಡಿನಲ್ಲಿ ಹಸಿರು ಮೇವು ಚಿಗುರೊಡೆದಿದೆ. ಈ ಹಿನ್ನೆಲೆಯಲ್ಲಿ ಆನೆ, ಜಿಂಕೆ, ಮೊಲ ಸೇರಿದಂತೆ ಅನೇಕ ಪ್ರಾಣಿಗಳು ಕಬಿನಿ ಹಿನ್ನೀರಿನ ಬಳಿ ಹಸಿರು ಹುಲ್ಲನ್ನು ಮೇಯಲು ಧಾವಿಸುತ್ತವೆ.
ಈ ವೇಳೆ ಸಫಾರಿಗೆ ತೆರಳುವ ಪ್ರವಾಸಿಗರು ವನ್ಯಜೀವಿಗಳ ಚಲನವಲನವನ್ನು ತಮ್ಮ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಾರೆ.
ಆನೆಗಳು ಮರಿಯಾನೆಗಳ ಜೊತೆ ಹಸಿರು ಹುಲ್ಲನ್ನು ತಿನ್ನುತ್ತಿರುವ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು, ನೆಟ್ಟಿಗರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಹೆಚ್ಚು ಹೆಚ್ಚು ಪ್ರಾಣಿಗಳು ಪ್ರವಾಸಿಗರ ಕಣ್ಣಿಗೆ ಕಾಣಿಸುತ್ತಿರುವ ಹಿನ್ನೆಲೆಯಲ್ಲಿ ನಾಗರಹೊಳೆ ಅರಣ್ಯ ಸಫಾರಿಗೆ ದಿನದಿಂದ ದಿನಕ್ಕೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.





