Mysore
26
overcast clouds

Social Media

ಗುರುವಾರ, 07 ಮೇ 2026
Light
Dark

ಮೈಸೂರಿನಿಂದ ಲಕ್ನೋಗೆ ಭವ್ಯ ಪೀಠ : UP ವಿಧಾನಸಭೆಯಲ್ಲಿ ಕರ್ನಾಟಕದ ಕಲಾ ಛಾಪು

ಮೈಸೂರು : ಕರ್ನಾಟಕದ ಕಲಾ-ಶಿಲ್ಪ ಪರಂಪರೆಯು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಮೈಸೂರಿನ ಖ್ಯಾತ ಕರಕುಶಲ ಶಿಲ್ಪಿ ಕೈಸರ್ ಅಲಿ ಖಾನ್ (ಕೈಜರ್ ಆಲಿ ಖಾನ್) ಅವರು ನಿರ್ಮಿಸಿದ ಸ್ಪೀಕರ್ ಪೀಠವನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಅಧಿಕೃತವಾಗಿ ಸ್ಥಾಪಿಸಲಾಗಿದೆ. ಇದನ್ನು “ಕರ್ನಾಟಕ ಮಾಡೆಲ್” ಎಂದೇ ಯೋಗಿ ಆದಿತ್ಯನಾಥ್ ಸರ್ಕಾರವು ಪ್ರಶಂಸಿಸಿದೆ.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಪೀಠದ ಮಾದರಿಯನ್ನು ಅನುಸರಿಸಿ, ಸ್ವಲ್ಪ ಬದಲಾವಣೆಗಳೊಂದಿಗೆ ಈ ಭವ್ಯ ಪೀಠವನ್ನು ರೂಪಿಸಲಾಗಿದೆ. 1956ರಲ್ಲಿ ಕೆಂಗಲ್ ಹನುಮಂತಯ್ಯ ಅವರ ಆಣತಿಯಂತೆ ಹುಣಸೂರು ಬೀಟಿಮರದಿಂದ ಮತ್ತು ಶಿವಮೊಗ್ಗದ ಕುಶಲಕರ್ಮಿಗಳಿಂದ ಕೆತ್ತನೆ ಮಾಡಲ್ಪಟ್ಟ ಕರ್ನಾಟಕದ ಸ್ಪೀಕರ್ ಪೀಠದಂತೆಯೇ, ಇದರಲ್ಲೂ ಸಾಂಪ್ರದಾಯಿಕ ಕೆತ್ತನೆಗಳು, ಅಲಂಕಾರಿಕ ಮೋಟಿಫ್‌ಗಳು ಮತ್ತು ಘನತೆಯನ್ನು ಪ್ರತಿಬಿಂಬಿಸುವ ವಿನ್ಯಾಸವಿದೆ. ಕರ್ನಾಟಕದ ಪೀಠದಲ್ಲಿ ಗಂಡಬೆರುಂಡ ಮತ್ತು ಸಿಂಹದ ಲಾಂಛನಗಳಿದ್ದರೆ, ಯುಪಿ ಪೀಠದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಕೆಲವು ಮಾರ್ಪಾಡುಗಳೊಂದಿಗೆ ತೆರೆದ ರಚನೆಯನ್ನು ಅಳವಡಿಸಲಾಗಿದೆ.

ಉತ್ತರ ಪ್ರದೇಶದ ಸ್ಪೀಕರ್ ಸತೀಶ್ ಮಹಾನ್ ಅವರು ಬೆಂಗಳೂರಿನ ವಿಧಾನಸೌಧಕ್ಕೆ ಭೇಟಿ ನೀಡಿದಾಗ ಕರ್ನಾಟಕದ ಪೀಠವನ್ನು ಮೆಚ್ಚಿಕೊಂಡಿದ್ದರು. ಅದರಿಂದ ಪ್ರೇರಿತರಾಗಿ ಅವರು ಇದೇ ರೀತಿಯ ಪೀಠವನ್ನು ತಯಾರಿಸುವ ಆಸಕ್ತಿ ವ್ಯಕ್ತಪಡಿಸಿದ್ದರು. ಕರ್ನಾಟಕದ ಸ್ಪೀಕರ್ ಯು.ಟಿ. ಖಾದರ್ ಅವರು ಈ ವಿಷಯದಲ್ಲಿ ಸಹಕರಿಸಿ ಮೈಸೂರಿನ ಕೈಸರ್ ಅಲಿ ಖಾನ್ ಅವರನ್ನು ಸಂಪರ್ಕಿಸಿದರು. ರೋಸ್‌ವುಡ್ ಮರದಿಂದ ತಯಾರಾದ ಈ ಪೀಠವು ಅತ್ಯಂತ ನುಣ್ಣಗೆ ಕೆತ್ತನೆಯಾಗಿದ್ದು, ಕರ್ನಾಟಕದ ಕುಶಲಕರ್ಮಿಗಳ ಕೈಚಳಕಕ್ಕೆ ಸಾಕ್ಷಿಯಾಗಿದೆ.

ಈ ಪೀಠವು ಉತ್ತರ ಪ್ರದೇಶ ವಿಧಾನಸಭೆಯ ಬಜೆಟ್ ಅಧಿವೇಶನಕ್ಕೂ ಮೊದಲು ಲಕ್ನೋ ತಲುಪಿದ್ದು, ಬುಧವಾರ ಅಧಿಕೃತ ಸ್ಥಾಪನೆ ನಡೆಯಿತು. ಇದೀಗ ಯುಪಿ ವಿಧಾನಸಭೆಯ ಸ್ಪೀಕರ್ ಪೀಠದ ಮೂಲಕ ಕರ್ನಾಟಕದ ಕಲಾ ಪರಂಪರೆಯು ಇನ್ನಷ್ಟು ರಾಷ್ಟ್ರವ್ಯಾಪ್ತವಾಗಿ ಮೆರೆಯುತ್ತಿದೆ.

Tags:
error: Content is protected !!