Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಸೆಸ್ಕ್ ಪ್ರಧಾನ ಕಚೇರಿಯಲ್ಲಿ 78ನೇ ಸ್ವಾತಂತ್ರ್ಯ ದಿನದ ಸಂಭ್ರಮ

ಮೈಸೂರು: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮೈಸೂರಿನ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್)ದ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಶೀಲಾ ಅವರು ಗುರುವಾರ ಧ್ವಜಾರೋಹಣವನ್ನು ನೆರವೇರಿಸಿದರು.

ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಅವರು, ಸೆಸ್ಕ್‌ ಅಧಿಕಾರಿಗಳ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಗುಣಮಟ್ಟದ ವಿದ್ಯುತ್‌ ಪೂರೈಕೆಗಾಗಿ ಶ್ರಮಿಸಿದ ಸಿಬ್ಬಂದಿಗೆ ಪ್ರಶಂಸಾ ಪತ್ರ ವಿತರಿಸಿದರು.

ಪ್ರಶಂಸಾ ಪತ್ರ ವಿತರಣೆ: ಮಡಿಕೇರಿ ಹಾಗೂ ಸಕಲೇಶಪುರ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಹಾನಿಗೊಳಗಾಗಿದ್ದ ವಿದ್ಯುತ್‌ ಕಂಬಗಳು ಹಾಗೂ ಪರಿವರ್ತಕಗಳು, ವಿದ್ಯುತ್‌ ಮಾರ್ಗಗಳನ್ನು ಬದಲಾಯಿಸಿ ವಿದ್ಯುತ್‌ ಪೂರೈಕೆ ಸುಗಮಗೊಳಿಸಿದ್ದ 500ಕ್ಕೂ ಹೆಚ್ಚು ಸಿಬ್ಬಂದಿಗೆ ಪ್ರಶಂಸಾ ಪತ್ರ ಹಾಗೂ ಉಡುಗೊರೆಯನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಯಿತು.

ಸೆಸ್ಕ್‌ ವ್ಯಾಪ್ತಿಯಲ್ಲಿ ಭಾರೀ ಮಳೆಯಿಂದಾಗಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಸಂದರ್ಭದಲ್ಲಿ ಮಡಿಕೇರಿ ಹಾಗೂ ಸಕಲೇಶಪುರ ವ್ಯಾಪ್ತಿಯಲ್ಲಿ ಸಾಕಷ್ಟು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದವು. ಈ ಹಿನ್ನೆಲೆಯ ಕೂಡಲೇ ಕಾರ್ಯಪ್ರವೃತ್ತರಾದ ಸೆಸ್ಕ್ ಹಿರಿಯ ಅಧಿಕಾರಿಗಳು ದುರಸ್ತಿ ಕಾರ್ಯಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಿ ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದರು.

ವಿದ್ಯುತ್ ಸೋರಿಕೆ ತಡೆ ಯಶಸ್ವಿ: ಮಡಿಕೇರಿ ಹಾಗೂ ಸುತ್ತಮುತ್ತಲೂ ಉಂಟಾಗುತ್ತಿದ್ದ ವಿದ್ಯುತ್ ಸೋರಿಕೆ ತಡೆಯುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿ ತಂಡಕ್ಕೂ ಪ್ರಶಂಸಾ ಪತ್ರವನ್ನು ನೀಡಲಾಯಿತು. ವಿದ್ಯುತ್ ಸೋರಿಕೆ ತಡೆಗಾಗಿ ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕರಾದ ಶೀಲಾ ಅವರು ಹಾಗೂ ಸೆಸ್ಕ್ ತಾಂತ್ರಿಕ ವಿಭಾಗದ ನಿರ್ದೇಶಕರಾದ ಮುನಿಗೋಪಾಲ್ ರಾಜ್ ಅವರು, ತಂಡವನ್ನು ನಿಯೋಜಿಸಿ 30 ದಿನಗಳೊಳಗೆ ಕೆಲಸ ಪೂರ್ಣಗೊಳಿಸುವ ಗುರಿ ನೀಡಿದ್ದರು. ಈ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸುವಲ್ಲಿ ಯಶಸ್ವಿಯಾದ ತಂಡವನ್ನು ಅಭಿನಂದಿಸಿ, ಮೆಚ್ಚುಗೆ ಪತ್ರ ನೀಡಲಾಯಿತು.

ಇದಲ್ಲದೇ ರೈತರ ಐಪಿ ಸೆಟ್‌ಗಳ ಆರ್‌ಆರ್‌ ನಂಬರ್‌ಗೆ ಆಧಾರ್ ಜೋಡಣೆ ಮಾಡುವ ಕಾರ್ಯದಲ್ಲಿ ರಾಜ್ಯದ ಇತರೆ ವಿದ್ಯುತ್ ಸರಬರಾಜು ನಿಗಮಗಳಿಗಿಂತಲೂ ಉತ್ತಮವಾಗಿ ಕೆಲಸ ಮಾಡಿರುವ ಸೆಸ್ಕ್ ಸಿಬ್ಬಂದಿಗೂ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು.

Tags: