ಮೈಸೂರು : ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಇದೇ ಮೊದಲ ಬಾರಿಗೆ 57 ಸಾವಿರ ಯುವ ಮತದಾರರು ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಸಜ್ಜಾಗಿದ್ದಾರೆ. ಮೇ 10ರಂದು ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದ್ದು, ಜಿಲ್ಲಾಡಳಿತ ಸಕಲ ತಯಾರಿ ನಡೆಸುತ್ತಿದೆ. ಮತಪ್ರಮಾಣ ಹೆಚ್ಚು ಮಾಡಲು ಸ್ವೀಪ್ ಸಮಿತಿ ಜಿಲ್ಲಾದ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿದೆ.
ಜಿಲ್ಲೆಯಲ್ಲಿ 26,38,487 ಮತದಾರರಿದ್ದು, ಇದರಲ್ಲಿ 18ರಿಂದ 19 ವರ್ಷದೊಳಗಿನ 57,048 ಯುವ ಮತದಾರರು ಮೊದಲ ಬಾರಿಗೆ ಮತದಾನ ಮಾಡುವ ಉತ್ಸಾಹದಲ್ಲಿದ್ದಾರೆ. ಯುವ ಮತದಾನವನ್ನು ಉತ್ತೇಜಿಸುವ ಸಲುವಾಗಿ ಮೈಸೂರು ಜಿಲ್ಲೆಯ 11 ಕ್ಷೇತ್ರಗಳಲ್ಲೂ ತಲಾ ಒಂದೊಂದು ಯುವಮತಗಟ್ಟೆ ಸ್ಥಾಪನೆ ಮಾಡಲಾಗುತ್ತಿದೆ. ಯುವ ಅಧಿಕಾರಿಗಳನ್ನೇ ಇಲ್ಲಿಗೆ ನಿಯೋಜನೆ ಮಾಡಿರುವುದು ವಿಶೇಷ.
ದೇಶಕ್ಕೆ ಯುವಜನರೆ ಆಸ್ತಿ. ಯುವಶಕ್ತಿ ದೇಶದ ಸಂಪತ್ತು ಕೂಡ. ಮತದಾನ ಪ್ರಕ್ರಿಯೆಯಲ್ಲಿ ಯುವಜನತೆ ಹೆಚ್ಚು ಭಾಗವಹಿಸಬೇಕು ಎಂಬ ಕಾರಣಕ್ಕೆ ಈ ಬಾರಿ ಕಾಲೇಜು ಸೇರಿದಂತೆ ಹಲವೆಡೆ ಮತಜಾಗೃತಿ ಮಾಡಲಾಗಿದೆ. 57 ಸಾವಿರ ಯುವ ಮತದಾರರು ಮೊದಲ ಬಾರಿಗೆ ಮತ ಚಲಾಯಿಸುತ್ತಿರುವುದು ಖುಷಿ ತಂದಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಎಲ್ಲೆಲ್ಲಿ ಎಷ್ಟೆಷ್ಟು ಯುವ ಮತದಾರರು : ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಅತಿಹೆಚ್ಚು ಸಂಖ್ಯೆ ಯುವ ಮತದಾರರಿದ್ದಾರೆ. 7,644 ಮಂದಿ ಮೊದಲ ಬಾರಿಗೆ ಮತಚಲಾಯಿಸಲು ಸಿದ್ಧರಾಗಿದ್ದಾರೆ. ಅಂತೆಯೇ ಹುಣಸೂರು ಕ್ಷೇತ್ರದಲ್ಲಿ 6,473,ಕೆ.ಆರ್.ನಗರ ಕ್ಷೇತ್ರದಲ್ಲಿ 6043, ಪಿರಿಯಾಪಟ್ಟಣ ಕ್ಷೇತ್ರದಲ್ಲಿ 5,243, ಎನ್.ಆರ್.ಕ್ಷೇತ್ರದಲ್ಲಿ 5,919, ವರುಣ ಕ್ಷೇತ್ರದಲ್ಲಿ 5,022, ಎಚ್.ಡಿ.ಕೋಟೆ ಕ್ಷೇತ್ರದಲ್ಲಿ4,925, ತಿ.ನರಸೀಪುರ ಕ್ಷೇತ್ರದಲ್ಲಿ 4,118, ನಂಜನಗೂಡು ಕ್ಷೇತ್ರದಲ್ಲಿ 4,027, ಕೆ.ಆರ್.ಕ್ಷೇತ್ರದಲ್ಲಿ 3,704, ಚಾಮರಾಜ ಕ್ಷೇತ್ರದಲ್ಲಿ 3,860 ಯುವ ಮತದಾರರಿದ್ದಾರೆ.