ದೇಶದ ಉತ್ಪಾದನೆಗೆ ಹೈನುಗಾರಿಕೆ ಇನ್ನೂ ಹೆಚ್ಚಿನ ಕೊಡುಗೆ ನೀಡಲಿ: ಡಾ.ಹೆಚ್.ಸಿ.ಮಹದೇವಪ್ಪ
ಮೈಸೂರು: ಮಾನವನ ಜೀವನದ ಜೊತೆಗೆ ಪಶುಗಳ ಸಾಕಾಣೆ ಹಾಗೂ ಹೈನುಗಾರಿಕೆ ಒಂದಕ್ಕೊಂದು ಬೆಸದುಕೊಂಡಿದೆ. ರಾಷ್ಟ್ರದ ಉತ್ಪಾದನೆಗೆ ಹೈನುಗಾರಿಕೆ ಇನ್ನೂ ಹೆಚ್ಚಿನ ಕೊಡುಗೆ ನೀಡುವಂತಾಗಲಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮತ್ತು ಕರ್ನಾಟಕ ಪಶುವೈದ್ಯಕೀಯ ಸಂಘದ ವತಿಯಿಂದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ಶನಿವಾರ ಆಯೋಜಿಸಿದ್ದ “ಪಶುವೈದ್ಯರ ರಾಜ್ಯ ಮಟ್ಟದ ತಾಂತ್ರಿಕ ವಿಚಾರ ಸಂಕಿರಣ ಹಾಗೂ 6ನೇ ಸುತ್ತಿನ ಕಾಲುಬಾಯಿಜ್ವರ ಲಸಿಕಾ ಕಾರ್ಯಕ್ರಮ” ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಶುಪಾಲನೆಯಿಂದ ಶೇ5 ರಷ್ಟು ಜಿಡಿಪಿ ವೃದ್ಧಿಯಾಗುತ್ತಿರುವುದು ಪ್ರಶಂಸೆಯ ವಿಚಾರ. ಹೆಣ್ಣು ಕರುಗಳೇ ಜನಿಸುವಂತೆ ಗರ್ಭ ಧರಿಸುವಷ್ಟು ತಂತ್ರಜ್ಞಾನ ಮುಂದುವರೆದಿದೆ. ಸಂತಾನಾಭಿವೃದ್ಧಿಯ ಜೊತೆಗೆ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಬೇಕು ಎಂದು ಹೇಳಿದರು.
ಕೃಷಿ ಕ್ಷೇತ್ರದಲ್ಲಿ ಪಶುಗಳಿಗಿಂತ ಯಂತ್ರದ ಬಳಕೆ ಹೆಚ್ಚಾಗಿದೆ. ಪ್ರಾಣಿಗಳ ಗೊಬ್ಬರವನ್ನು ಹೆಚ್ಚು ಬಳಸದೆ, ರಾಸಾಯನಿಕದ ಮೊರೆ ಹೋಗಲಾಗುತ್ತದೆ. ಇದು ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಆದಷ್ಟು ಈ ಕ್ರಮವನ್ನು ತಡೆಗಟ್ಟುವಂತೆ ಜಾಗೃತಿ ಮೂಡಿಸಬೇಕು ಎಂದರು.
ಟಿಪ್ಪು ಸುಲ್ತಾನ್ ಕೂಡ ಹಳ್ಳಕಾರ್ ತಳಿಗಳ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ನಮ್ಮ ದೊಡ್ಡಪ್ಪ ಏನೂ ಓದಿರಲಿಲ್ಲ. ಅವರು ಕೂಡ ಊರಿನಲ್ಲಿ ಅನಾರೋಗ್ಯಕ್ಕೆ ತುತ್ತಾದ ಪಶುಗಳಿಗೆ ಔಷಧಿ ನೀಡುತ್ತಿದ್ದರು. ಆದರೆ ಇಂದು ವೈಜ್ಞಾನಿಕತೆ ಪರಿಣಾಮಕಾರಿಯಾಗಿ ಬೆಳೆದಿದೆ ಎಂದು ಹೇಳಿದರು.