ಮೈಸೂರು: ರಸ್ತೆ ಅಗಲೀಕರಣಕ್ಕಾಗಿ 40 ಮರಗಳ ಕಟಾವು ಮಾಡಿರುವ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಮೈಸೂರಿನ ಅರಣ್ಯಾಧಿಕಾರಿಗಳಿಂದ ವರದಿ ಕೇಳಿದ್ದಾರೆ.
ಈ ಸಂಬಂಧ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸಿ 7 ದಿನಗಳೊಳಗಾಗಿ ವರದಿ ಸಲ್ಲಿಸುವಂತೆಯೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಅರಣ್ಯ ಪಡೆ ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಜಾಗತಿಕ ತಾಪಮಾನ ಏರಿಕೆ ಹಾಗೂ ಹವಾಮಾನ ಬದಲಾವಣೆಯ ಸವಾಲುಗಳನ್ನು ಇಡೀ ವಿಶ್ವ ಎದುರಿಸುತ್ತಿದೆ. ಈ ಪ್ರಸಕ್ತ ಸನ್ನಿವೇಶದಲ್ಲಿ ಮರಗಳ ಸಂರಕ್ಷಣೆ ಇಲಾಖೆಯ ಕರ್ತವ್ಯವಾಗಿದೆ. ಅಭಿವೃದ್ಧಿ ಜೊತೆ ಪರಿಸರ ಸಂರಕ್ಷಣೆ ಆಗಬೇಕು ಎಂದರು.
ಹೈದರಾಲಿ ರಸ್ತೆಯ ಅಗಲೀಕರಣದ ಅಗತ್ಯ ಇತ್ತೇ? ಮರ ಕಡಿಯುವ ಅಗತ್ಯವಿತ್ತೇ? ಮರ ಕಡಿತಲೆಗೆ ನಿಯಮಾನುಸಾರ ಕ್ರಮ ವಹಿಸಲಾಗಿದೆಯೇ ಎಂಬ ಬಗ್ಗೆ ಸಿಸಿಎಫ್ ದರ್ಜೆಯ ಅಧಿಕಾರಿಯಿಂದ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.





