ಮೈಸೂರು: ಜ್ಞಾನಕ್ಕಿಂತ ದೊಡ್ಡ ಸಂಪತ್ತು ಬೇರೊಂದಿಲ್ಲ. ಸಂಪತ್ತಿನಿಂದ ಜ್ಞಾನ ಸಂಪಾದಿಸುವುದಕ್ಕೆ ಸಾಧ್ಯವಿಲ್ಲ. ಸಮಾಜದ ಬಡವರು, ಮಧ್ಯಮ ವರ್ಗದವರ ಮಕ್ಕಳ ಶಿಕ್ಷಣಕ್ಕಾಗಿ ಕೆಲಸ ಮಾಡುತ್ತಿರುವುದು ಪುಣ್ಯದ ಕೆಲಸವಾಗಿದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ನಗರದ ವಿಜಯನಗರ ಮೂರನೇ ಹಂತದ ಸಪ್ತಮಾತೃಕಾ ದೇವಸ್ಥಾನದ ಎದುರು ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘದಿಂದ ನೂತನವಾಗಿ ನಿರ್ಮಿಸಿರುವ ವಿದ್ಯಾರ್ಥಿನಿಲಯದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು. ಸಮಾಜದ ಬೆಳವಣಿಗೆಗೆ ಎಲ್ಲರೂ ಕೈ ಜೋಡಿಸಬೇಕು. ಸಮಾಜ ಒಗ್ಗಟ್ಟಾಗಿ ನಿಂತರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಬೃಹತ್ ವಿದ್ಯಾರ್ಥಿನಿಲಯ ನಿರ್ಮಾಣವೇ ಸಾಕ್ಷಿಯಾಗಿದೆ ಎಂದು ಹೇಳಿದರು.
ಶಾಸಕ ಜಿ.ಟಿ.ದೇವೇಗೌಡ ವಿದ್ಯಾಸಿರಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಆರ್ಯ ಈಡಿಗರ ಸಂಘ ಅಧ್ಯಕ್ಷ ಡಾ.ಎಂ.ಕೆ.ಪೋತರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸೋಲೂರು ರೇಣುಕಾ ಪೀಠಾಧ್ಯಕ್ಷರಾದ ಶ್ರೀ ವಿಖ್ಯಾತನಂದ ಸ್ವಾಮೀಜಿ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಡಾ.ಎಂ.ತಿಮ್ಮೇಗೌಡ, ಉಪಾಧ್ಯಕ್ಷ ಟಿ.ಶಿವಕುವಾರ್, ಜೆಪಿಎನ್‌ಪಿ ಪ್ರತಿಷ್ಠಾನ ಗೌರವಾಧ್ಯಕ್ಷ ಜೆ.ಪಿ.ಸುಧಾಕರ್, ಜಿಲ್ಲಾ ಬಿಲ್ಲವ ಸಂಘದ ಅಧ್ಯಕ್ಷ ವೇದಕುವಾರ್, ಮೈಸೂರು ಜಿಲ್ಲಾ ಆರ್ಯ ಈಡಿಗರ ಮಹಿಳಾ ಸಂಘದ ಅಧ್ಯಕ್ಷೆ ಸರೋಜಮ್ಮ ಪಾಪೇಗೌಡ, ಸಂಘದ ಉಪಾಧ್ಯಕ್ಷ ರಾಜಶೇಖರ ಕದಂಬ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಕೃಷ್ಣಮೂರ್ತಿ, ಉಪಾಧ್ಯಕ್ಷರಾದ ಟಿ.ಶಿವಣ್ಣ, ಕೆ.ರಾಜು ಇನ್ನಿತರರು ಹಾಜರಿದ್ದರು. ನಂತರ ಕುವಾರಿ ಅನನ್ಯ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಉತ್ತಮವಾದ ಶಿಕ್ಷಣ ನೀಡಲು ವಿದ್ಯಾರ್ಥಿನಿಲಯ ನಿರ್ಮಾಣ ಮಾಡಿರುವುದು ಸಂತೋಷದ ಸಂಗತಿ. ಐವತ್ತು ದಾನಿಗಳು 50 ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿರುವುದನ್ನು ನೋಡಿದರೆ ಸಮಾಜದ ಬೆಳವಣಿಗೆಗೆ ಯಾವ ರೀತಿ ಸೇವೆ ಸಲ್ಲಿಸುತ್ತಾರೆ ಎಂಬುದು ಅರ್ಥವಾಗುತ್ತದೆ. ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುವ ವಿಜಯನಗರದಲ್ಲಿ ಭೂಮಿ ಮಂಜೂರು ಮಾಡಿಸುವಂತೆ ಕೇಳಿದಾಗ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಒಪ್ಪಿಗೆ ಕೊಡಿಸಿದ್ದೇನೆ. ಮುಂದಿನ ದಿನಗಳಲ್ಲಿ ಹಾಸ್ಟೆಲ್‌ಗೆ ಮೂಲ ಸೌಕರ್ಯಗಳನ್ನು ಒದಗಿಸಲು ಅಗತ್ಯ ನೆರವು ನೀಡಲಾಗುವುದು.
-ಜಿ.ಟಿ.ದೇವೇಗೌಡ, ಶಾಸಕರು





