ಮೈಸೂರು: ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ನ ಎಲ್ಲಾ 135 ಮಂದಿ ಶಾಸಕರು ಸೇರಿ ಸಿಎಂ ಮಾಡಿದ್ದಾರೆ. ಮುಂದಿನ ಐದು ವರ್ಷವೂ ಕೂಡಾ ಸಿದ್ದರಾಮಯ್ಯ ಅವರೆ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ನಗರದ ತಮ್ಮ ನಿವಾಸದ ಬಳಿ ಮಾಧ್ಯಮಗಳ ಜೊತೆ ಮಾತನಾಡದ ಅವರು, ಯಾವುದೇ ಕಾರಣ ಇಲ್ಲದೇ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲಾಗುವುದು ಎಂದು ಹೇಳುತ್ತಿದ್ದಾರೆ. ನಮ್ಮದು ಸ್ಥಿರ ಸರ್ಕಾರವಾಗಿದ್ದು, ಐದು ವರ್ಷವೂ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಸ್ಪಷ್ಟಪಡಿಸಿದರು.
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ ಎಂಬ ಕಾರಣಕ್ಕೆ ಎಲ್ಲರೂ ಒಗ್ಗೂಡಿದ್ದರು. ನಿನ್ನೆ ನಡೆದ ಜನಾಂದೋಲನ ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರು ಸಿಎಂ ಗೆ ಬೆಂಬಲ ನೀಡಿದ್ದೆ ಸಾಕ್ಷಿ ಎಂದರು.
ಮುಡಾ ಪ್ರಕರಣದಿಂದ ನಮ್ಮ ಶಕ್ತಿ ಕುಗ್ಗಿಲ್ಲ. ಬಿಜೆಪಿ-ಜೆಡಿಎಸ್ ಪ್ರತ್ಯುತ್ತರ ಸಲುವಾಗಿ ಜನಾಂದೋಲನ ಮೂಲಕ ತಿರುಗೇಟು ನೀಡಿದ್ದೇವೆ ಎಂದು ಟಾಂಗ್ ಕೊಟ್ಟರು.