Mysore
27
broken clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಚಿರತೆ ದಾಳಿಗೆ 10 ಮೇಕೆ ಬಲಿ

ಮೈಸೂರು ತಾಲ್ಲೂಕು ಧನಗಳ್ಳಿಯಲ್ಲಿ ಘಟನೆ

ಮೈಸೂರು: ಚಿರತೆ ದಾಳಿಗೆ 10 ಮೇಕೆಗಳು ಬಲಿಯಾಗಿರುವ ಘಟನೆ ತಾಲ್ಲೂಕಿನ ಜಯಪುರ ಹೋಬಳಿಯ ಧನಗಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಧನಗಳ್ಳಿ ಗ್ರಾಮದ ರೈತ ಬಸವರಾಜು ಎಂಬವರು ಗ್ರಾಮದ ಸಮೀಪದ ಕೆಎಚ್‌ಬಿ ಕಾಲೋನಿ ಬಳಿ ತಮಗೆ ಸೇರಿದ ಹತ್ತು ಮೇಕೆಗಳನ್ನು ಮೇಯಲು ಬಿಟ್ಟಿದ್ದರು. ಸಂಜೆಯ ವೇಳೆಗೆ ಮನೆಗೆ ಹೊಡೆದುಕೊಂಡು ಬರುವ ಸಲುವಾಗಿ ಸ್ಥಳಕ್ಕೆ ಹೋಗಿ ನೋಡಿದಾಗ ಏಳು ಮೇಕೆಗಳು ರಕ್ತಸಿಕ್ತವಾಗಿ ಸತ್ತು ಬಿದ್ದಿರುವುದು ಪತ್ತೆಯಾಗಿದೆ. ಘಟನೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಗ್ರಾಮಸ್ಥರು ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಪರಿಶೀಲಿಸಿ, ಚಿರತೆಯ ದಾಳಿಯಿಂದಾಗಿಯೇ ಮೇಕೆಗಳು ಸಾವನ್ನಪ್ಪಿವೆ ಎಂಬುದಾಗಿ ತಿಳಿಸಿದ್ದಾರೆ.

ಮೃತಪಟ್ಟಿರುವ ಮೇಕೆಗಳ ಕತ್ತಿನ ಭಾಗದಲ್ಲಿ ಕೋರೆಹಲ್ಲುಗಳಿಂದ ಕಚ್ಚಿದ ಆಳವಾದ ಗಾಯಗಳಾಗಿದ್ದು, ಮೈಮೇಲೂ ಉಗುರಿನಿಂದ ತರಚಿದ ರೀತಿಯಲ್ಲಿ ಆಳವಾದ ಗಾಯಗಳಾಗಿವೆ. ಸತ್ತ ಮೇಕೆಗಳ ದೇಹದಿಂದ ರಕ್ತ ಸೋರುತ್ತಿದ್ದು, ಆಗಷ್ಟೇ ಚಿರತೆ ದಾಳಿ ನಡೆಸಿ ಕೊಂದು ಹಾಕಿರಬಹುದೆಂದು ಗ್ರಾಮದ ಶಿವಪ್ರಕಾಶ್ ಹಾಗೂ ಇತರ ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಗ್ರಾಮಸ್ಥರು ಸ್ಥಳದಲ್ಲಿ ನಾಪತ್ತೆಯಾಗಿರುವ ಮತ್ತೆ ಮೂರು ಮೇಕೆಗಳಿಗಾಗಿ ಹುಡುಕಾಟ ನಡೆಸಿದರಾದರೂ ಅಷ್ಟೊತ್ತಿಗಾಗಲೇ ಕತ್ತಲೆ ಆವರಿಸಿದ್ದರಿಂದಾಗಿ ಅವುಗಳು ಪತ್ತೆಯಾಗಿಲ್ಲ, ನಾಪತ್ತೆಯಾಗಿರುವ ಈ ಮೂರು ಮೇಕೆಗಳ ಮೇಲೂ ಚಿರತೆ ದಾಳಿ ಮಾಡಿ ಕೊಂದು ಹಾಕಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ರೈತ ಬಸವರಾಜು ಅವರು ಮೇಕೆಗಳನ್ನು ಸಾಕಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು.ಈಗ ಮೇಕೆಗಳು ಸಾವನ್ನಪ್ಪಿರುವುದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಅವರಿಗೆ ದಿಕ್ಕು ತೋಚದಂತಾಗಿದೆ. ಅರಣ್ಯ ಇಲಾಖೆ ಸಂಕಷ್ಟಕ್ಕೆ ಸಿಲುಕಿರುವ ಬಸವರಾಜು ಅವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಧನಗಳ್ಳಿ ಮಗ್ಗುಲಲ್ಲಿರುವ ಕೆಎಚ್‌ಬಿ ಕಾಲೋನಿಯಲ್ಲಿ ಕೆಲವೇ ಮನೆಗಳು ನಿರ್ಮಾಣವಾಗಿದ್ದು, ಕುರುಚಲು ಗಿಡಗಳು ಬೆಳೆದಿರುವುದರಿಂದ ಚಿರತೆಗಳು ಸಂಚರಿಸುತ್ತಿರುವುದು ದೃಢಪಟ್ಟಿದ್ದು, ಸಂಜೆ ವೇಳೆ ಈ ಕಾಲೋನಿಯ ರಸ್ತೆಯಲ್ಲಿ ಜನರು ಸಂಚರಿಸಲು ಭಯ ಪಡುವಂತಾಗಿದೆ. ದನಗಳನ್ನು ಮೇಯಿಸುವವರು ಮತ್ತು ಜಮೀನಿಗೆ ತೆರಳುವವರು ಈಗ ಆತಂಕಕ್ಕೆ ಒಳಗಾಗಿದ್ದಾರೆ. ಹಾಗಾಗಿ ಚಿರತೆಗಳನ್ನು ಬೋನು ಇರಿಸಿ ಸೆರೆಹಿಡಿಯಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.

Tags:
error: Content is protected !!