ಜನ ಸಂಚಾರಕ್ಕೆ ಅಡಚಣೆ, ನಿರ್ವಹಣೆ ಮರೆತು ಕುಳಿತ ಲೋಕೋಪಯೋಗಿ ಇಲಾಖೆ
ಪ್ರಶಾಂತ್ ಎಸ್ ಮೈಸೂರು.
ಮೈಸೂರು: ಎರಡು ದಶಕದ ಹಿಂದೆ ರೂಪುಗೊಂಡ ಮೈಸೂರು- ಹ್ಯಾಂಡ್‌ಪೋಸ್ಟ್- ಮಾನಂದವಾಡಿ ರಾಜ್ಯ ಹೆದ್ದಾರಿ ನಿರ್ವಹಣೆ ಕೊರತಯಿಂದ ಹಾಳಾಗಿದ್ದು, ಜನ ತೊಂದರೆ ನಡುವೆ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ಮೊಣಕಾಲುದ್ದದ ಗುಂಡಿಗಳು ಬಿದ್ದಿರುವ ಈ ರಸ್ತೆಯಲ್ಲಿ ಸವಾರರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ.ಮೈಸೂರಿನಿಂದ ಎಚ್ ಡಿ ಕೋಟೆ ಹಾಗೂ ಸರಗೂರಿಗೆ ಸಂಪರ್ಕಿಸುವ ಈ ರಸ್ತೆಯಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿದ್ದು, ಸದಾ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಸಂಪೂರ್ಣ ಹದಗೆಟ್ಟಿರುವ ಕರಿಗಳ ಗೇಟ್, ಕೋಡಹಳ್ಳಿಮರ ಗೇಟ್, ಕೋಳಗಾಲ, ಮಾದಾಪುರ, ಹೈರಿಗೆ, ಎಚ್ ಮಟಕೆರೆ,ಈ ರಸ್ತೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯ ದುಸ್ಥಿತಿ ಹಿನ್ನೆಲೆ ಜನಪ್ರತಿನಿಧಿಗಳಿಗೆ ಮತ್ತು ಸರಕಾರಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಲಘು ವಾಹನ ಚಾಲಕರು ವಾಹನ ಚಲಾಯಿಸುವ ಸಂದರ್ಭದಲ್ಲಿ ಕಾರು, ಬೈಕ್‌ಗಳು ಗುಂಡಿಗೆ ಬಿದ್ದು ವಾಹನ ಜಖಂಗೊಳ್ಳುವುದು, ಕೆಟ್ಟು ನಿಲ್ಲುವುದು, ಬೈಕ್ ಸವಾರರಂತೂ ಗುಂಡಿಗೆ ಬಿದ್ದು ಆಸ್ಪತ್ರೆ ಸೇರುವುದು. ಇತರ ಸವಾರರೊಂದಿಗೆ ತಂಟೆ-ತಕರಾರು ಮಾಡುವುದು ನಿತ್ಯ ನಡೆಯುತ್ತಲೇ ಇರುತ್ತದೆ.
೨೦ ವರ್ಷದ ಹಿಂದೆ ಈ ರಸ್ತೆಯನ್ನು ಆಗ ಸಚಿವರಾಗಿದ್ದ ಎಂ.ಶಿವಣ್ಣ ಅವರು ವಿಶೇಷ ಮುತುವರ್ಜಿ ವಹಿಸಿ ಅಭಿವೃದ್ದಿಪಡಿಸಿದ್ದರು. ಇದರಿಂದಾಗಿ ಮೈಸೂರಿಂದ ಹ್ಯಾಂಡ್‌ಪೋಸ್ಟ್‌ವರೆಗೆ ವಿಶಾಲ ರಸ್ತೆ ರೂಪುಗೊಂಡಿತ್ತು. ಏಳು ವರ್ಷದ ಹಿಂದೆ ಅಂತರಸಂತೆಯಿಂದ ಮಾನಂದವಾಡಿ ಭಾಗದ ರಸ್ತೆಯನ್ನು ಹಿಂದಿನ ಸಂಸದ ಆರ್.ಧೃವನಾರಾಯಣ ಆಸಕ್ತಿ ವಹಿಸಿ ಅಭಿವೃದ್ದಿಪಡಿಸಿದ್ದರು. ಈಗ ನಿರ್ವಹಣೆ ಕೊರತೆಯಿಂದ ಅಲ್ಲಲ್ಲಿ ತೊಂದರೆಯಾಗುತ್ತಿದೆ.
ಅವೈಜ್ಞಾನಿಕವಾದ ಹೆದ್ದಾರಿ ಕಾಮಗಾರಿಯಿಂದಾಗಿ ಮಳೆ ನೀರು ಸೂಕ್ತ ರೀತಿಯಲ್ಲಿ ಚರಂಡಿಗೆ ಹೋಗದೆ ರಸ್ತೆಯಲ್ಲಿಯೇ ಹರಿಯುತ್ತಿರುವ ಕಾರಣ ರಸ್ತೆಯ ಮೇಲೆ ಹಾಕಿದ ಡಾಂಬರಿನ ಸಮೇತದಿಂದಾಗಿ ಹೊಂಡಗಳು ನಿರ್ಮಾಣಗೊಳ್ಳುತ್ತಿದ್ದು ಅಸಮರ್ಪಕ ಕಾಮಗಾರಿ ಪ್ರಯಾಣಿಕ ಜೀವಕ್ಕೆ ಕುತ್ತು ತರುತ್ತಿದೆ ಎಂಬ ಆರೋಪಗಳು ಕೂಡ ಇವೆ.
ಈಗಂತೂ ಮಳೆ ಬರುತ್ತಿರುವುದರಿಂದ ಹೆದ್ದಾರಿಯಲ್ಲೇ ಅಪಾಯಕಾರಿಯಾಗಿ ನೀರು ಹರಿಯುವುದರಿಂದ ರಾತ್ರಿ ಸಮಯದಲ್ಲಂತೂ ಹೊಂಡಗಳನ್ನು ತಪ್ಪಿಸಿ ಸಂಚರಿಸುವುದೇ ದೊಡ್ಡ ಸಾಹಸವಾಗಿದೆ.
ಹಾಳಾದ ರಸ್ತೆಗಳಲ್ಲಿ ವಾಹನ ಚಲಾಯಿಸುವಲ್ಲಿ ಕೊಂಚ ಮೈ ಮರೆತರೂ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಹೀಗಾಗಿ ಈ ರಸ್ತೆಯ ಮೇಲೆ ಹೋಗುವವರು ಮೈತುಂಬಾ ಕಣ್ಣಾಗಿಸಿಕೊಂಡು ಹೋಗಬೇಕಾಗಿದೆ. ಈ ರಸ್ತೆಯ ಆಯ್ದ ಭಾಗದಲ್ಲಿ ರಸ್ತೆ ಸರಿ ಇದ್ದರೂ ಉಳಿದ ಕಡೆ ಎಲ್ಲ ಸಂಪೂರ್ಣ ಹಾಳಾಗಿದೆ. ಸಂಬಂಧಪಟ್ಟವರನ್ನು ಎಚ್ಚರಿಸಬೇಕಾದ ಅಧಿಕಾರಿಗಳು ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯ ವಹಿಸಿರುವುದರಿಂದ ಸಮಸ್ಯೆ ಹಾಗೆಯೆ ಉಳಿದಿದೆ.
ಮೈಸೂರು ಎಚ್ ಡಿ ಕೋಟೆ ರಸ್ತೆ ಸಂಪೂರ್ಣ ಹಾಳಾಗಿದ್ದು, ಈ ರಸ್ತೆಯಲ್ಲಿ ಓಡಾಡಲು ಕಷ್ಟ ಆಗುತ್ತಿದೆ. ಇತ್ತೀಚೆಗೆ ಮಳೆ ಬಂದಿದ್ದರಿಂದ ರಸ್ತೆಗಳು ಗುಂಡಿಗಳಾಗಿದ್ದು, ಕಣ್ಣಮುಂದೆಯೇ ಅಪಘಾತಗಳು ನಡೆದಿವೆ. ಜನಪ್ರತಿನಿಧಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಓಡಾಡಿದರೂ ಇತ್ತ ಗಮನಹರಿಸಿಲ್ಲ. ಸಂಬಂಧಪಟ್ಟವರು ಇತ್ತ ಕಡೆ ಗಮನಹರಿಸಿ ಹದಗೆಟ್ಟಿರುವ ರಸ್ತೆ ಸರಿಪಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲಿ.
–ಸಿಂಹಾದ್ರಿ ಪ್ರಕಾಶ್, ಹಂಪಾಪುರ, ಸ್ಥಳೀಯರು
ಮೈಸೂರು ಮಾನಂದವಾಡಿ ಹೆದ್ದಾರಿ ಹದಗೆಟ್ಟಿರುವುದು ನಮ್ಮ ಗಮನದಲ್ಲಿದೆ.ಅದನ್ನು ಪರಿಶೀಲನೆ ಕೂಡ ಮಾಡಿದ್ದೇವೆ.ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಅತೀ ಶೀಘ್ರದಲ್ಲೇ ಅನುದಾನ ಬಿಡುಗಡೆಯಾಗುತ್ತದೆ. ತಕ್ಷಣ ಹಂತ ಹಂತವಾಗಿ ಕೆಲಸ ಪ್ರಾರಂಭಿಸುತ್ತೇವೆ.
–ಗಣೇಶ್, ಅಧೀಕ್ಷಕ ಎಂಜಿನಿಯರ್ ಲೋಕೊಪಯೋಗಿ ಇಲಾಖೆ ಮೈಸೂರು





