Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ವಿವಾದದ ಮಧ್ಯೆ ಶೌಚಾಲಯವಾಯಿತು ಲ್ಯಾನ್ಸ್‌ ಡೌನ್‌ ಬಿಲ್ಡಿಂಗ್‌

ಮೈಸೂರು: ಪಾರಂಪರಿಕ ನಗರದ ಹೆಗ್ಗುರುತಾದ ಲ್ಯಾನ್ಸ್‌ ಡೌನ್‌ ಕಟ್ಟಡ ಕುಸಿದು ಬರೋಬ್ಬರಿ ಹತ್ತು ವರ್ಷಗಳು ಕಳೆದಿವೆ. 2012 ರ ಆಗಷ್ಟ್‌ 25 ರಂದು ಮಳಿಗೆ ಸಂಖ್ಯೆ 17 ಮತ್ತು 18ರ ಮೇಲ್ಛಾವಣಿ ಕುಸಿದು ನಾಲ್ವರು ವ್ಯಕ್ತಿಗಳು ಸಾವನ್ನಪ್ಪಿದ್ದ ಘಟನೆ ಇನ್ನೂ ಜನರ ಮನಸ್ಸಿನಿಂದ ಮರೆಯಾಗಿಲ್ಲ. ಈ ನಡುವೆ ಶಿಥಿಲವಾಗಿರುವ ಪಾರಂಪರಿಕ ಕಟ್ಟಡವನ್ನು ನವೀಕರಿಸಬೇಕೇ , ಮರು ನಿರ್ಮಿಸಬೇಕೇ ಎಂಬ ಚರ್ಚೆ ಇನ್ನೂ ನಡೆಯುತ್ತಿದೆ. ಆದರೆ ಈ ಕಟ್ಟಡದ ಸದ್ಯದ ಸ್ಥಿತಿ ಹೇಗಿದೆ ಎಂದು ನಿಮಗೆ ಗೊತ್ತೇ ?

ಲ್ಯಾನ್ಸ್‌ ಡೌನ್‌ ಕಟ್ಟಡದ ಸ್ಥಿತಿಗತಿ ಹೇಗಿದೆ ಎಂದು ನೋಡುವುದು ಬಿಡಿ. ಹತ್ತಿರಕ್ಕೆ ಹೋಗಲೂ ಆಗದಷ್ಟು ಗಬ್ಬುನಾತ ಮೂಗಿಗೆ ಬಡಿಯುತ್ತದೆ. ಲ್ಯಾನ್ಸ್ ಡೌನ್ ಕಟ್ಟಡದ ಮುಂಭಾಗಕ್ಕೆ ಸುರಕ್ಷತೆಯ ದೃಷ್ಟಿಯಿಂದ ಕಬ್ಬಿಣದ ತಡೆಗೋಡೆ ನಿರ್ಮಿಸಲಾಗಿದೆ. ಆದರೆ, ಹಿಂಭಾಗದಲ್ಲಿ ಹಳೇ ಸಂತೆಪೇಟೆಗೆ ಬರುವ ಜನರಿಗೆ, ಅಂಗಡಿ ಮಾಲೀಕರಿಗೆ ಈ ಕಟ್ಟಡ “ಸುಲಭ ಶೌಚಾಲಯʼವಾಗಿದೆ. ಇಲ್ಲಿನ ಖಾಲಿ ಗೋದಾಮುಗಳಲ್ಲಿ ಅಂಗಡಿಯ ತ್ಯಾಜ್ಯಗಳನ್ನು ತುಂಬಲಾಗುತ್ತಿದೆ. ರಾತ್ರಿ ವೇಳೆ ಕಟ್ಟಡದ ಹತ್ತಿರಕ್ಕೆ ಹೋಗಲೂ ಭಯಪಡುವ ವಾತಾವರಣವಿದೆ.

 

ಮಳೆ ಬಂದಾಗ ಕಟ್ಟಡದ ಛಾವಣಿಗಳಿಂದ ನೀರು ಸೋರುವುದು, ಗಾರೆ ಕಳಚಿ ಬೀಳುವುದು ಸಾಮಾನ್ಯ ಸಂಗತಿ. ನವೀಕರಣ ಮತ್ತು ಮರು ನಿರ್ಮಾಣದ ಚರ್ಚೆಯ ನಡುವೆಯೇ ಇಡೀ ಕಟ್ಟಡ ಕುಸಿದು ಬಿದ್ದರೆ ಅಶ್ಚರ್ಯವೇನೂ ಇಲ್ಲ.

ಮೈಸೂರು ಮಹಾರಾಜರಾಗಿದ್ದ ಹತ್ತನೇ ಚಾಮರಾಜ ಒಡೆಯರ್ ಅವರು ಜನರಿಗೆ ಅಗತ್ಯ ವಸ್ತುಗಳು ಒಂದೇ ಸೂರಿನಡಿ ಸಿಗಬೇಕೆಂಬ ಸದುದ್ದೇಶದಿಂದ ಅರಮನೆಗೆ ಕೂಗಳತೆ ದೂರದಲ್ಲಿ ಈ ಕಟ್ಟಡವನ್ನು ಕಟ್ಟಿಸಿದ್ದರು. ಬ್ರಿಟಿಷ್ ವೈಸ್‌ ರಾಯ್‌ ಆಗಿದ್ದ ಲ್ಯಾನ್ಸ್‌ ಡೌನ್‌ ವಿಕ್ಟೋರಿಯಾ ರಾಣಿಯ ಪ್ರತಿನಿಧಿಯಾಗಿ 1892 ರ ಲ್ಲಿ ನವೆಂಬರ್ ತಿಂಗಳಿನಲ್ಲಿ ಮೈಸೂರಿಗೆ ಭೇಟಿ ನೀಡಿದ್ದ. ಇದರ ಜ್ಞಾಪಕಾರ್ಥವಾಗಿ ಈ ಕಟ್ಟಡಕ್ಕೆ ಅವನ ಹೆಸರಿಡಲಾಗಿತ್ತು.

ಮುಂಬೈನ ವಿಕ್ಟೋರಿಯಾ ಟರ್ಮಿನಲ್ ಮಾದರಿಯಲ್ಲಿ ಕಟ್ಟಿದ ಈ ಕಟ್ಟಡ ಅಂದು ಮೈಸೂರಿನ ಹೆಗ್ಗುರುತಾಗಿತ್ತು. 1927 ರಲ್ಲಿ ಮೈಸೂರಿಗೆ ಭೇಟಿ ನೀಡಿದ್ದ ಮಹಾತ್ಮಾ ಗಾಂಧೀಜಿ ಈ ಕಟ್ಟಡದಲ್ಲಿದ್ದ ಖಾದಿ ಭಂಡಾರಕ್ಕೂ ಭೇಟಿ ನೀಡಿದ್ದರು.

ಮೈಸೂರು ನಗರದ ಆಯಕಟ್ಟಿನ ಜಾಗದಲ್ಲಿರುವ ಈ ಕಟ್ಟಡದ ಎರಡು ಮಳಿಗೆಗಳು ಕುಸಿದುಬಿದ್ದ ತಕ್ಷಣವೇ ದೊಡ್ಡ ಮಟ್ಟದಲ್ಲಿ ಕೋಲಾಹಲ ಉಂಟಾಗಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್ ಸರ್ವಪಕ್ಷ ಮುಖಂಡರ ಸಭೆ ನಡೆಸಿ ಮುಂದಿನ ಒಂದು ವರ್ಷದೊಳಗೆ ಪುನರ್ ನಿರ್ಮಾಣ ಕಾರ್ಯ ಕೈಗೊಳ್ಳುವ ಭರವಸೆ ನೀಡಿದ್ದರು. ಯಡಿಯೂರಪ್ಪ ಸರಕಾರ ಇದಕ್ಕಾಗಿ ಎರಡು ಕೋಟಿ ರೂ. ಹಣ ಮಂಜೂರು ಮಾಡಿತ್ತು. ಕಟ್ಟಡವನ್ನು ಮರು ನಿರ್ಮಿಸಬೇಕೇ, ನವೀಕರಿಸಬೇಕೇ ಎಂದು ವರದಿ ನೀಡಲು ಎರಡು ಸಮಿತಿಗಳನ್ನು ರಚಿಸಲಾಗಿತ್ತು. ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಮುಖ್ಯಸ್ಥ ಡಾ.ವಿಶ್ವನಾಥ್ ಹಾಗೂ ಭಾರತೀಯ ಪರಂಪರೆ ನಗರಗಳ ಒಕ್ಕೂಟದ ಗೋವಿಂದನ್ ಕುಟ್ಟಿ ಅವರು ಎರಡು ಪ್ರತ್ಯೇಕ ವರದಿಯನ್ನು ಸಲ್ಲಿಸಿ ಮೈಸೂರು ನಗರ ಪಾಲಿಕೆ ಅಧೀನದಲ್ಲಿರುವ ಪಾರಂಪರಿಕ ಕಟ್ಟಡದ ಪುನರುಜ್ಜೀವನಕ್ಕೆ ಸಲಹೆ ಮಾಡಿದ್ದರು. ಅಷ್ಟರಲ್ಲಿ ಎರಡೂವರೆ ವರ್ಷಗಳೇ ಕಳೆದು ಹೋಗಿದ್ದವು.

2015ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಯಾಗಿದ್ದಾಗ ಲ್ಯಾನ್ಸ್ ಡೌನ್ ಕಟ್ಟಡ ಪುನರ್‌ ನಿರ್ಮಾಣಕ್ಕಾಗಿ 6 ಕೋಟಿ ರೂ. ಬಿಡುಗಡೆ ಮಾಡಿ ಶಂಕುಸ್ಥಾಪನೆಯನ್ನೂ ನೆರವೇರಿಸಿದ್ದರು. ಮುಂಬೈನ ಮೆ. ಸಾವನಿ ಕನ್ಸ್ಟ್ರಕ್ಷನ್ ಕಂಪನಿ ಶೇ.೪೦ರಷ್ಟು ಕೆಲಸ ಮುಗಿಸಿತ್ತು. ಆದರೆ ದೇವರಾಜ ಮಾರುಕಟ್ಟೆಯ ಕಮಾನು ದ್ವಾರ ನವೀಕರಣ ಸಂದರ್ಭದಲ್ಲಿ ಕುಸಿದು ಬಿದ್ದ ಬಳಿಕ ಎಲ್ಲ ಕೆಲಸಗಳು ಅಲ್ಲಿಗೇ ಸ್ಥಗಿತಗೊಂಡವು. ಆ ನಂತರದಲ್ಲಿ ಕಟ್ಟಡದ ಸಂರಕ್ಷಣೆಗಾಗಿ ಅಳವಡಿಸಿದ್ದ ಕಿಟಿಕಿ-,ಬಾಗಿಲುಗಳು ಕಳ್ಳಕಾಕರ ಪಾಲಾಯಿತು.

ಈ ಮಧ್ಯೆ ಕಟ್ಟಡದಲ್ಲಿದ್ದ ಬಾಡಿಗೆದಾರರು ಕಟ್ಟಡವನ್ನು ಕೆಡಹುವುದನ್ನು ಪ್ರಶ್ನಿಸಿ ಹೈಕೋರ್ಟ್‌ ಮೊರೆ ಹೋಗಿದ್ದರು. ಇದಾದ ಬಳಿಕ ಹೈಕೋರ್ಟ್‌ ನಿರ್ದೇಶನದ ಮೇರೆಗೆ ಮತ್ತೆ ಎರಡು ಸಮಿತಿಗಳನ್ನು ರಚಿಸಲಾಗಿತ್ತು. ಈ ಸಮಿತಿಗಳೂ ಲ್ಯಾನ್ಸ್‌ ಡೌನ್‌ ಕಟ್ಟಡ ‌ ಹಾಗೂ ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿ ಮರು ನಿರ್ಮಾಣ ಮಾಡುವಂತೆ ವರದಿ ನೀಡಿದ್ದವು.

ತಜ್ಞರ ಸಮಿತಿ ರಚಿಸಿ ಅಭಿಪ್ರಾಯ ಪಡೆದುಕೊಂಡು 6 ತಿಂಗಳೊಳಗೆ ಸಮಸ್ಯೆ ಇತ್ಯರ್ಥ ಪಡಿಸುವಂತೆ ಎರಡು ವರ್ಷಗಳ ಹಿಂದೆಯೇ ಹೈಕೋರ್ಟ್‌ ‌ ಪಾಲಿಕೆಗೆ ಸೂಚಿಸಿತ್ತು. ಆದರೆ ಕಟ್ಟಡವನ್ನು ಉಳಿಸಿಕೊಂಡು ನವೀಕರಣ ಮಾಡಬೇಕೇ ಅಥವಾ ಪೂರ್ತಿ ಕೆಡವಿ ಪಾರಂಪರಿಕ ಶೈಲಿಯಲ್ಲಿ ಮತ್ತೆ ಕಟ್ಟಬೇಕೇ ಎನ್ನುವ ವಿಚಾರದಲ್ಲಿ ತೀರ್ಮಾನ ತೆಗೆದುಕೊಳ್ಳಲು ನಗರಪಾಲಿಕೆಗಾಗಲೀ, ಸರಕಾರಕ್ಕಾಗಲೀ ಇದುವರೆಗೂ ಸಾಧ್ಯವಾಗಿಲ್ಲ.

ಪ್ರಜಾಪ್ರಭುತ್ವದಲ್ಲಿ ಒಮ್ಮತದ ತೀರ್ಮಾನ ದೂರದ ಮಾತು. ಬಹುಜನರ ಅಭಿಪ್ರಾಯದ ನಡುವೆ ವಿವೇಚನಾಯುಕ್ತ ತೀರ್ಮಾನ ತೆಗೆದುಕೊಳ್ಳುವುದು ಬಹಳ ಮುಖ್ಯ. ಲ್ಯಾನ್ಸ್‌ ಡೌನ್‌ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆ ವಿಚಾರದಲ್ಲಿ ಸರಕಾರ ಶೀಘ್ರವಾಗಿ ತೀರ್ಮಾನ ತೆಗೆದುಕೊಳ್ಳದೇ ಹೋದರೆ ಕಾಲ ತನ್ನದೇ ತೀರ್ಮಾನ ತೆಗೆದುಕೊಳ್ಳಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ