ಮೈಸೂರು : ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆಗೆ ಮೂರನೇ ಹಂತದ ಹಾಗೂ ಅಂತಿಮ ಫಿರಂಗಿ ಸಿಡಿಸುವ ತಾಲೀಮು ನಡೆಯಿತು.
ವಸ್ತು ಪ್ರದರ್ಶನ ಆವರಣದ ವಾಹನ ನಿಲುಗಡೆ ಜಾಗದಲ್ಲಿ 13 ಆನೆಗಳು ಹಾಗೂ 35 ಕುದುರೆಗಳ ಸಮ್ಮುಖದಲ್ಲಿ ಶುಕ್ರವಾರ ಮಧ್ಯಾಹ್ನ ಮೂರನೇ ಹಂತದ ತಾಲೀಮು ನಡೆಸಲಾಯಿತು. ಏಳು ಫಿರಂಗಿ ಗಾಡಿಗಳಿಂದ ಸಿಎಆರ್ ಸಿಬ್ಬಂದಿಗಳು ಕುಶಾಲು ತೋಪು ಸಿಡಿಸಿದರು. ಒಟ್ಟು ಮೂರು ಸುತ್ತಿನಲ್ಲಿ 21 ಕುಶಾಲು ತೋಪು ಸಿಡಿಸಿ ತಾಲೀಮು ನಡೆಸಲಾಯಿತು. ಆನೆಗಳು ಹಾಗೂ ಕುದುರೆಗಳು ಶಬ್ದಕ್ಕೆ ಹೊಂದಿಕೊಂಡಂತೆ ಕಂಡುಬಂದಿದ್ದು, ಕುಶಾಲು ತೋಪು ಸಿಡಿಸಿದಾಗ ಬೆದರದೆ ನಿಂತಿದ್ದವು. ಈ ವೇಳೆ ಡಿಸಿಎಫ್ ಡಾ. ವಿ. ಕರಿಕಾಳನ್ ಮಾತನಾಡಿ, ಮೂರನೇ ಹಂತದ ಫಿರಂಗಿ ತಾಲೂಕು ಯಶಸ್ವಿಯಾಗಿ ನಡೆದಿದೆ. ವಿಶೇಷವೆಂದರೆ ಯಾವ ಆನೆಯ ಕಾಲಿಗೂ ಸರಪಳಿ ಕಟ್ಟಿರಲಿಲ್ಲ. ಮರಕ್ಕೆ ಕಟ್ಟಿ ಹಾಕಿರಲಿಲ್ಲ. ಆದರೂ ಆನೆಗಳು ಬೆಚ್ಚಲಿಲ್ಲ. ಹಾಗಾಗಿ ಜಂಬೂ ಸವಾರಿ ಯಶಸ್ವಿಯಾಗುವ ಭರವಸೆ ಇದೆ. ಆನೆಗಳು ಆರೋಗ್ಯವಾಗಿವೆ ತೂಕದಲ್ಲಿ 200 ರಿಂದ 400 ಕೆಜಿ ಹೆಚ್ಚಳವಾಗಿದೆ ಎಂದರು.