ಪಶ್ಚಿಮ ಬಂಗಾಳ, ಬೆಂಗಳೂರು, ಮೈಸೂರು ಮೂಲದ ಮೂವರು ಮಹಿಳೆಯರ ರಕ್ಷಣೆ
ಮೈಸೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಸಿಸಿಬಿ ಘಟಕದ ಪೊಲೀಸರು ಬಂಧಿಸಿದ್ದು, ಪಶ್ಚಿಮ ಬಂಗಾಳ ಮೂಲದ ಓರ್ವ ಮಹಿಳೆ ಸೇರಿದಂತೆ ಮೂವರು ಮಹಿಳೆಯರನ್ನು ರಕ್ಷಿಸಿದ್ದಾರೆ.
ಆನಂದನಗರ ಹೊರ ವರ್ತುಲ ರಸ್ತೆಯಲ್ಲಿರುವ ಪರ್ವ ಬೋರ್ಡಿಂಗ್ ಅಂಡ್ ಲಾಡ್ಜಿಂಗ್ ಮೇಲೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಮಹಿಳೆಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ ಮೂವರನ್ನು ಬಂಧಿಸಿದ್ದಾರೆ. ಈ ವೇಳೆ ಪಶ್ಚಿಮ ಬಂಗಾಳದ ಓರ್ವ ಮಹಿಳೆ, ಬೆಂಗಳೂರು ಹಾಗೂ ಮೈಸೂರು ಮೂಲದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಂ.ಎಸ್.ಗೀತ, ಸಿಸಿಬಿ ಘಟಕದ ಎಸಿಪಿ ಸಿ.ಕೆ.ಅಶ್ವಥ್ ನಾರಾಯಣ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್‌ಸ್ಪೆಕ್ಟರ್ ಎ.ಮಲ್ಲೇಶ್, ಎಸ್‌ಐ ಪ್ರತಿಭಾ ಜಂಗವಾಡ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.





