Mysore
20
overcast clouds
Light
Dark

ಮುರ್ಮು ಆಗಮದ ಹಿನ್ನೆಲೆ ಚಾ.ಬೆಟ್ಟದಲ್ಲಿ ಸಕಲ ಸಿದ್ಧತೆ

ವೇದಿಕೆಯಲ್ಲಿ ರಾಷ್ಟ್ರಪತಿ ಸೇರಿ ೧೩ ಮಂದಿ ಉಪಸ್ಥಿತಿ

ಮೈಸೂರು: ದಸರಾ ಮಹೋತ್ಸವಕ್ಕೆ ಚಾಲನೆ ನೀಡಲು ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮದ ಅಂತಿಮ ಹಂತದ ಸಿದ್ಧತೆಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಪರಿಶೀಲಿಸಿದರು.

ಭಾನುವಾರ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಾಲಯ, ವೇದಿಕೆ, ವಿಶ್ರಾಂತಿ ಕೊಠಡಿ, ಪಾರ್ಕಿಂಗ್ ಜಾಗ, ಸಾರ್ವಜನಿಕರು ಆಸೀನರಾಗುವ ವೇದಿಕೆ ನಿರ್ಮಾಣ ಕಾರ್ಯ ಮುಂತಾದವುಗಳ ಅಂತಿಮ ಹಂತದ ತಯಾರಿಯನ್ನು ವೀಕ್ಷಿಸಿದರು. ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸಚಿವರಿಗೆ ಸಿದ್ಧತೆಗಳ ಬಗ್ಗೆ ವಿವರಿಸಿದರು.

ಬಳಿಕ ಮಾತನಾಡಿದ ಸಚಿವರು, ರಾಷ್ಟ್ರಪತಿಗಳು ಮೈಸೂರು ವಿಮಾನ ನಿಲ್ದಾಣದಿಂದ ಚಾಮುಂಡಿಬೆಟ್ಟಕ್ಕೆ ನೇರವಾಗಿ ಬಂದಿಳಿಯಲಿದ್ದಾರೆ. ವೇದಿಕೆಯಲ್ಲಿ ರಾಷ್ಟ್ರಪತಿ, ಮುಖ್ಯಮಂತ್ರಿ, ರಾಜ್ಯಪಾಲರು ಸೇರಿ ೧೩ ಮಂದಿಗೆ ಅವಕಾಶವಿದೆ. ಶಾಸಕರು, ವಿಧಾನಪರಿಷತ್ ಸದಸ್ಯರಿಗೆ ಮತ್ತೊಂದು ಕಡೆ ವೇದಿಕೆ ಇರುತ್ತದೆ. ರಾಷ್ಟ್ರಪತಿಗಳನ್ನು ಆಹ್ವಾನಿಸುವ ಸಂದರ್ಭದಲ್ಲಿ ಎಚ್.ಡಿ.ಕೋಟೆ, ಹುಣಸೂರು, ಪಿರಿಯಾಪಟ್ಟಣ, ಚಾಮರಾಜನಗರ, ಮಡಿಕೇರಿ ಭಾಗದ ೧೪ ಮಂದಿ ಆದಿವಾಸಿಗಳೊಂದಿಗೆ ಫೋಟೋ ಸೆಷನ್‌ಗೆ ಹತ್ತು ನಿಮಿಷಗಳ ಕಾಲ ಸಮಯ ಕೊಡುವಂತೆ ಕೇಳಿದ ಮನವಿಗೆ ಒಪ್ಪಿದ್ದು, ದೇವಸ್ಥಾನದ ಬಲಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮಹಾಪೌರ ಶಿವಕುಮಾರ್, ಸಂಸದ ಪ್ರತಾಪ್ ಸಿಂಹ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಜೆಎಲ್‌ಆರ್ ಮಾಜಿ ಅಧ್ಯಕ್ಷ ಎಂ.ಅಪ್ಪಣ್ಣ, ಡಿಸಿಪಿ ಎಂ.ಎಸ್.ಗೀತಾ ಪ್ರಸನ್ನ ಇನ್ನಿತರರು ಹಾಜರಿದ್ದರು.

 

ಚಾಮುಂಡೇಶ್ವರಿ ದೇವಾಲಯಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ

ಮೈಸೂರು: ದಸರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಿರುವ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದೇವಾಲಯದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಾಮುಂಡೇಶ್ವರಿ ದೇವಿಗೆ ಸೋಮವಾರ ಮುಂಜಾನೆ ೪ ಗಂಟೆಯಿಂದಲೇ ವಿಶೇಷ ಪೂಜೆ ನಡೆಯಲಿದೆ. ನಂತರ ಸಮಾರಂಭ ನಡೆಯುವ ವೇದಿಕೆಗೆ ಚಾಮಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ತಂದು ಅಲಂಕರಿಸಲಾಗುತ್ತದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಮುಂಡಿಬೆಟ್ಟದಿಂದ ನಿರ್ಗಮಿಸುವ ತನಕ ಅಂದರೆ ೧೧.೩೦ರವರೆಗೆ ದೇವಸ್ಥಾನಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ