ಗುಂಡ್ಲುಪೇಟೆ: ನೇರ ನೇಮಕ ಮತ್ತು ನೇರ ವೇತನಕ್ಕೆ ಆಗ್ರಹಿಸಿ ಪಟ್ಟಣದ ಪುರಸಭೆಯ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು.
ಪಟ್ಟಣದ ಪುರಸಭಾ ಕಚೇರಿಯ ಮುಂದೆ ನಡೆದ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ನೌಕರ ರವಿ, ಪಟ್ಟಣದ ಪುರಸಭೆಯಲ್ಲಿ 16 ಮಂದಿ ಚಾಲಕರು 6 ಮಂದಿ ಸ್ವಚ್ಛತಾ ಸಿಬ್ಬಂದಿ, 5 ಮಂದಿ ನೀರುಗಂಟಿ ಮತ್ತು ಡಾಟಾ ಆಪರೇಟರ್ ಸೇರಿದಂತೆ ಸುಮಾರು 25ಕ್ಕೂ ಹೆಚ್ಚು ಮಂದಿ ಕಳೆದ 15-20 ವರ್ಷಗಳಿಂದ ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತಿದ್ದು ಅವರನ್ನು ಖಾಯಂಗಳಿಸಬೇಕೆಂದು ಒತ್ತಾಯಿಸಿದರು.
ಸರ್ಕಾರ ಇತ್ತೀಚೆಗೆ ನೇರ ನೇಮಕಾತಿಯಾದ 13 ಮಂದಿಯನ್ನು ಮಾತ್ರ ಖಾಯಂಗೊಳಿಸಿ ಕಳೆದ 20 ವರ್ಷಗಳಿಂದ ದುಡಿಯುತ್ತಿರುವ ಹೊರಗುತ್ತಿಗೆ ನೌಕರರನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಸರ್ಕಾರ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುವವರೆಗೂ ಹೊರಗುತ್ತಿಗೆ ನೌಕರರು ಸ್ವಚ್ಛತಾ ಕಾರ್ಯ ಕೈಗೊಳ್ಳದೆ ಕೆಲಸಕ್ಕೆ ಗೈರಾಗುವ ಮೂಲಕ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.
ನಾಗರಾಜು, ವಿಮಲ್, ಮುರುಗ ಮತ್ತು ಇನ್ನಿತರ ಹೊರಗುತ್ತಿಗೆ ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು.





