ಮೈಸೂರು: ಗ್ರಾಮೀಣ ಪ್ರದೇಶದ ಬಡ ಜನತೆಗೆ ಶಿಕ್ಷಣ ಮತ್ತು ಆರೋಗ್ಯ ಸುಧಾರಣೆಗೆ ಒತ್ತು ನೀಡುವ ಧ್ಯೇಯ ಹೊಂದಿರುವ ಅಸ್ತಿತ್ವ ಫೌಂಡೇಷನ್ ವತಿಯಿಂದ ಭಾನುವಾರ ನಂಜನಗೂಡು ತಾಲ್ಲೂಕಿನ ಗೆಜ್ಜಿಗನಹಳ್ಳಿಯಲ್ಲಿ ಏರ್ಪಡಿಸಿದ್ದ ಮೊದಲ ಆರೋಗ್ಯ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು. ೨೦೦ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಕೋವಿಡ್ ಸಾಂಕ್ರಾಮಿಕ ಪಿಡುಗಿನ ಕಾಲಘಟ್ಟದಲ್ಲಿ ಗ್ರಾಮೀಣ ಭಾಗದ ಬಡ ಜನತೆಗೆ ಆಹಾರ ಪದಾರ್ಥಗಳನ್ನು ವಿತರಿಸಿ ನೆರವಾದ ‘ಅಸ್ತಿತ್ವ ಫೌಂಡೇಷನ್ ಟ್ರಸ್ಟ್’ ಇದೀಗ ತನ್ನ ಸಾಮಾಜಿಕ ಕರ್ತವ್ಯದ ಮುಂದುವರಿದ ಭಾಗವಾಗಿ ಹಳ್ಳಿಗಾಡಿನಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಲು ಮುಂದಾಗಿದೆ.
ಇದರ ಭಾಗವಾಗಿ ಭಾನುವಾರ ಜೆಎಸ್‌ಎಸ್ ಆಸ್ಪತ್ರೆಯ ಸಹಯೋಗದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಹೃದ್ರೋಗ, ನರರೋಗ, ಸ್ತ್ರೀ ರೋಗ, ಕೀಲು ಮೂಳೆ ರೋಗಗಳ ತಪಾಸಣೆ,ನೇತ್ರ ತಪಾಸಣೆ ವಿಭಾಗ, ಸಾಮಾನ್ಯ ಚಿಕಿತ್ಸೆ ವಿಭಾಗ, ಪ್ರಸೂತಿ, ಹೃದಯ ಸಂಬಂಧಿ ಕಾಯಿಲೆ ಮತ್ತು ಕೀಲು ಮೂಳೆ… ಹೀಗೆ ಐದು ಪ್ರತ್ಯೇಕ ವಿಭಾಗಗಳಲ್ಲಿ ತಜ್ಞ ವೈದ್ಯರು ಶಿಬಿರಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿದರು.
ಅಧಿಕ ರಕ್ತದೊತ್ತಡ (ಬಿಪಿ), ಮಧುಮೇಹ (ಶುಗರ್), ಕಣ್ಣಿನ ತಪಾಸಣೆ, ಮೂಳೆ ಸಾಂದ್ರತೆ ಮತ್ತಿತರ ಪರೀಕ್ಷೆಗಳನ್ನು ಮಾಡಲಾಯಿತು. ಇಸಿಜಿ ವ್ಯವಸ್ಥೆ ಕಲ್ಪಿಸಿದ್ದರಿಂದ ಗ್ರಾಮದ ಬಹಪಾಲು ಜನರು ಶಿಬಿರದಲ್ಲಿ ತಪಾಸಣೆಗೆ ಒಳಗಾದರು. ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ, ಕೀಲು ಮೂಳೆ ರೋಗಗಳು ಸಾಮಾನ್ಯವಾಗಿದೆ. ಇವು ಶ್ರೀಮಂತ ಕಾಯಿಲೆಗಳಾಗಿದ್ದು, ಬಡ ರೋಗಿಗಳು ಈ ಕಾಯಿಲೆಗಳ ವೈದ್ಯಕೀಯ ವೆಚ್ಚ ಭರಿಸಲು ಬಹಳ ಕಷ್ಟ.
ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ಹೀಗಾಗಿ ಸಂಸ್ಥೆಯ ಮೊದಲ ಹೆಜ್ಜೆಯಾಗಿ ಈ ಆರೋಗ್ಯ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆಯ ಟ್ರಸ್ಟಿ ಗಿರೀಶ್ ಬಾಗ ನುಡಿದರು.
ಕೀಲು ಮೂಳೆ ತಪಾಸಣೆಗೆ ಹೆಚ್ಚು ಮಂದಿ: ವೃದ್ಧರು ವಯೋ ಸಹಜ ಕೀಲು ಮೂಳೆಗಳು, ಬಿಪಿ, ಶುಗರ್ ಕಾಯಿಲೆಗೆ ಒಳಗಾಗುವುದು ಸರ್ವೇ ಸಾಮಾನ್ಯ. ಹೀಗಾಗಿ ಶಿಬಿರದಲ್ಲಿ ಹೆಚ್ಚು ಮಂದಿ ವಯೋ ವೃದ್ಧರು ಸರದಿಯಲ್ಲಿ ನಿಂತು ಕೀಲು ಮೂಳೆಗಳ ತಪಾಸಣೆ ಮಾಡಿಸಿಕೊಂಡರು. ಕೆಲವರಿಗೆ ಉಚಿತವಾಗಿ ಮಾತ್ರೆ ಮತ್ತು ಔಷಧಿಗಳನ್ನು ನೀಡಲಾಯಿತು. ಮತ್ತೆ ಕೆಲವರಿಗೆ ಹೆಚ್ಚಿನ ಚಿಕಿತ್ಸೆಗೆ ಸೂಚಿಸಲಾಯಿತು.
ಅಸ್ತಿತ್ವ ಫೌಂಡೇಷನ್ ನಡೆಸುತ್ತಿರುವ ಮೊದಲ ಆರೋಗ್ಯ ಶಿಬಿರ ಇದಾಗಿದ್ದು, ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಪಿಎಚ್‌ಸಿ ಕೇಂದ್ರಗಳು ಇಲ್ಲದಿರುವ ಕುಗ್ರಾಮಗಳಲ್ಲಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸುವ ಉzಶವಿದ್ದು, ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ. ಶಿಬಿರದಲ್ಲಿ ಪಾಲ್ಗೊಂಡು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರಿಗೆ ಜೆಎಸ್‌ಎಸ್ ಆಸ್ಪತ್ರೆ ವತಿಯಿಂದ ರಿಯಾಯಿತಿ ದರದಲ್ಲಿ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಗಿರೀಶ್ ಬಾಗ ತಿಳಿಸಿದರು.
ಜೆಎಸ್‌ಎಸ್ ಆಸ್ಪತ್ರೆಯ ಸುಮಾರು ೧೨ ಮಂದಿ ವೈದ್ಯರು ಮತ್ತು ಮೂವರು ಫಾರ್ಮಸಿ ಸಿಬ್ಬಂದಿ ಆಪ್ತತೆಯಿಂದ ಜನರೊಂದಿಗೆ ಶಿಬಿರದ ಯಶಸ್ಸಿಗೆ ಶ್ರಮಿಸಿದರು. ಅಸ್ತಿತ್ವ ಫೌಂಡೇಷನ್ ಟ್ರಸ್ಟ್‌ನ ಅಧ್ಯಕ್ಷರಾದ ಎಂ.ಜಿ.ಪ್ರಗತಿ, ಟ್ರಸ್ಟಿ ಮಹದೇವ ಪ್ರಸಾದ್, ರಂಗನಾಥ್, ಗಿರೀಶ್ ಬಾಗ, ಹೃದ್ರೋಗ ತಜ್ಞರಾದ ಡಾ.ಪೂರ್ಣಿಮಾ, ಸಾಮಾನ್ಯ ತಪಾಸಣೆಯಲ್ಲಿ ಡಾ.ಅನು ಜೋಶ್, ಕೀಲು ಮೂಳೆ ತಪಾಸಣೆಯ ವೈದ್ಯ ಡಾ.ಶ್ರೇಯಸ್, ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞರಾದ ಡಾ.ಅನೂಪ್, ಡಾ.ಕೀರ್ತನಾ ತಪಾಸಣೆ ನಡೆಸಿದರು.
ಗ್ರಾಮೀಣ ಜನತೆಯ ಆರೋಗ್ಯದ ದೃಷ್ಟಿಯಿಂದ ವೃದ್ಧರು ಮತ್ತು ಮಹಿಳೆಯರು ಎದುರಿಸುವ ಆರೋಗ್ಯ ಸಮಸ್ಯೆಗಳನ್ನು ಮೊದಲ ಹಂತದಲ್ಲಿ ಗುರುತಿಸಿ ಹಿನ್ನೆಲೆಯಲ್ಲಿ ನಡೆಸಿದ ಮೊದಲ ಶಿಬಿರ ಅತ್ಯಂತ ಯಶಸ್ವಿಯಾಗಿದೆ. ೨೨೦ಕ್ಕೂ ಹೆಚ್ಚು ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡಿದ್ದಾರೆ. ಗ್ರಾಮೀಣ ಜನತೆಯ ಶಿಕ್ಷಣ ಮತ್ತು ಆರೋಗ್ಯದ ಕಾಳಜಿಯೇ ಅಸ್ತಿತ್ವ ಫೌಂಡೇಷನ್ ಉದ್ದೇಶವಾಗಿದೆ. – ಎಂ.ಜಿ.ಪ್ರಗತಿ, ಅಧ್ಯಕ್ಷರು, ಅಸ್ತಿತ್ವ ಫೌಂಡೇಷನ್ ಟ್ರಸ್ಟ್.
ನಾನು ಒಬ್ಬನೇ ಇzನೆ. ಚಿಕಿತ್ಸೆಗೆ ಹಣ ಖರ್ಚುಮಾಡುವಷ್ಟು ಸ್ಥಿತಿವಂತನಲ್ಲ. ನನಗೆ ವಯೋ ಸಹಜವಾದ ಮಂಡಿ ನೋವು ಮತ್ತು ಬಿಪಿ, ಶುಗರ್ ಕಾಯಿಲೆಗಳ ಬಗ್ಗೆ ಆತಂಕವಿರುವ ಕಾರಣ ತಪಾಸಣೆ ಮಾಡಿಸಿಕೊಳ್ಳುತ್ತಿರುವೆ. ಇಂತಹ ಶಿಬಿರಗಳು ನಡೆದಾಗ ನಮ್ಮಂತಹವರಿಗೆ ನೆರವಾಗುತ್ತದೆ. – ಮರೀಗೌಡ
ಮಂಡಿ ಮತ್ತು ರಟ್ಟೆ ನೋವು ಕಾಣಿಸಿಕೊಳ್ಳುತ್ತಿತ್ತು. ಇದಕ್ಕಾಗಿ ಚಿಕಿತ್ಸೆ ಪಡೆಯುವ ಉzಶದಿಂದ ತಪಾಸಣೆ ಶಿಬಿರಕ್ಕೆ ಬಂದಿರುವೆ. ಮಾತ್ರೆ ಮತ್ತು ಔಷಧಿಗಳು ದೊರೆತು ಗುಣಮುಖವಾದರೆ ಸಾಕು. ಇನ್ನೇನು ಬೇಡ. -ಮಹದೇವಮ್ಮ