ಹನೂರು: ತಾಲೂಕಿನ ರಾಮಪುರ ಹೋಬಳಿಯ ಕಾಡಂಚಿನ ಪ್ರದೇಶಗಳಾದ ಮಾರ್ಟಳ್ಳಿಯಿಂದ ಜಲ್ಲಿಪಾಳ್ಯವರೆಗಿನ ರೈತರ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ನೇತೃತ್ವದಲ್ಲಿ ನಾಲ್ ರೋಡ್ ಗ್ರಾಮದ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು.
ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲ್ ರೋಡ್ ಗ್ರಾಮದ ಸರ್ಕಲ್ ನಲ್ಲಿ ಸುಮಾರು 500ಕ್ಕೂ ಹೆಚ್ಚು ರೈತರು ಜಮಾಯಿಸಿ ಸ್ಥಳೀಯ ಶಾಸಕ ಎಂಆರ್ ಮಂಜುನಾಥ್ ಹಾಗೂ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಈ ವೇಳೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಮಾತನಾಡಿ ಚುನಾವಣಾ ಸಂದರ್ಭದಲ್ಲಿ ಸುಳ್ಳು ಭರವಸೆಗಳನ್ನು ನೀಡಿ ರೈತರಿಂದ ವೋಟು ಪಡೆದ ಶಾಸಕರು ಮತ್ತು ಜನಪ್ರತಿನಿಧಿಗಳು ರೈತರನ್ನು ಕಡೆಗಣಿಸಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ರಾಮಪುರದಿಂದ ನಾಲ್ ರೋಡ್ ಮಾರ್ಗದವರೆಗಿನ ರಸ್ತೆ ತೀವ್ರ ಹದಗೆಟ್ಟಿದ್ದು ಶೀಘ್ರವಾಗಿ ರಸ್ತೆ ದುರಸ್ತಿ ಪಡಿಸಿ, 40 ಟನ್ ವರೆಗಿನ ಭಾರ ತಡೆದುಕೊಳ್ಳುವ ಗುಣಮಟ್ಟದ ರಸ್ತೆಯನ್ನಾಗಿ ನಿರ್ಮಿಸಬೇಕು. ರಾಮಪುರ ಹೋಬಳಿ ಹೂಗ್ಯಂ ಸರ್ವೆ ನಂಬರ್ 239ರ 2700 ಎಕರೆ 35 ಸೆಂಟು ಜಮೀನು ಒಂದೇ ಆರ್ಟಿಸಿಯಲ್ಲಿ ನಮೂದಾಗಿದ್ದು ಅಲ್ಲಿ ವ್ಯವಸಾಯ ಮಾಡುವ ಎಲ್ಲಾ ರೈತರು ಜಮೀನು ಪೋಡುಗಳಾಗದೆ ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆರ್‌ಟಿಸಿಯಲ್ಲಿರುವ ಎಲ್ಲ ರೈತರಿಗೂ ಪ್ರತ್ಯೇಕ ಪೋಡುಗಳನ್ನಾಗಿ ಮಾಡಬೇಕು, ಕಾಡು ಪ್ರಾಣಿಗಳಾದ ಆನೆ, ಜಿಂಕೆ ,ಸಾರಂಗ, ಕಾಡು ಹಂದಿ, ಮುಂತಾದ ವನ್ಯ ಪ್ರಾಣಿಗಳ ಹಾವಳಿಯಿಂದ ರೈತರಿಗೆ ತೊಂದರೆಯಾಗಿದ್ದು, ಆನೆ ಹಾವಳಿ ತಡೆಯಲು ರೈಲ್ವೆ ಕಂಬಿಗಳನ್ನು ಅಳವಡಿಸಿ ಸೋಲಾರ್ ಬೇಲಿ ಹಾಕಬೇಕು, ಸ್ಥಳೀಯ ನಾಟಿ ತಳಿ ಹಸುಗಳ ಸಂತತಿಯನ್ನು ಉಳಿಸಲು ಕಾಡಿನಲ್ಲಿ ಮೇಯಿಸಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ ನಾಲ್ಕು ವರ್ಷಗಳ ಹಿಂದೆ ನಿರಂತರ ಜ್ಯೋತಿ ವಿದ್ಯುತ್ ಕಲ್ಪಿಸಲಾಗಿದೆ ಆದರೆ ಎರಡು ವರ್ಷಗಳ ನಂತರ ಕಳಪೆ ಕಾಮಗಾರಿಯಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಸಮರ್ಪಕವಾಗಿ ಕೇಬಲ್ ಅಳವಡಿಸಿ ಗುಣಮಟ್ಟದ ವಿದ್ಯುತ್ ಪೂರೈಸಬೇಕು. ಕೂಡ್ಲೂರು ಸುಳ್ವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳನ್ನು ನೇಮಕ ಮಾಡಬೇಕು, ನಮ್ಮ ಭಾಗದ ಗೊಬ್ಬರಗಳು ಬೇರೆ ರಾಜ್ಯಗಳಿಗೆ ಸಾಗಣೆ ಮಾಡುವುದನ್ನು ನಿರ್ಬಂಧ ಮಾಡಬೇಕು, ಮಾರ್ಟಳ್ಳಿ ಗ್ರಾಮದಲ್ಲಿ ಎಸ್ ಬಿ ಐ ಬ್ಯಾಂಕ್ ತೆರೆಯಬೇಕು ಎಂದು ಆಗ್ರಹಿಸಿದರು.
ಸೆಸ್ಕಾಂ ಇಲಾಖೆಯ ಎಇಇ ಶಂಕರ್ ಮಾತನಾಡಿ ಈಗಾಗಲೇ ಕೇಬಲ್ ಬದಲಾವಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಿರಂತರ ಜ್ಯೋತಿ ನೀಡಲು ವ್ಯವಸ್ಥೆ ಮಾಡಲಾಗುವುದು. ರೈತರು ಸಹಕರಿಸಬೇಕು ಎಂದರು.
ವನ್ಯ ಪ್ರಾಣಿಗಳ ಹಾವಳಿಯಿಂದ ನಷ್ಟ ಆಗಿರುವ ರೈತರುಗಳಿಗೆ ಪರಿಹಾರ ನೀಡಲು ಈಗಾಗಲೇ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರದಿಂದ ಅನುದಾನ ಬಾರದೆ ಇರುವುದರಿಂದ ಪರಿಹಾರ ನೀಡಲು ವಿಳಂಬವಾಗಿದೆ ಎಂದು ರಾಮಪುರ ವಲಯ ಅರಣ್ಯ ಅಧಿಕಾರಿ ಕಾಂತರಾಜು ಎಸ್ ಚೌಹಾಣ್ ತಿಳಿಸಿದರು.
ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಸೂಕ್ತ ಭರವಸೆ ನೀಡಬೇಕು ಎಂದು ಪಟ್ಟು ಹಿಡಿದಿದ್ದ ಹಿನ್ನೆಲೆ ಪ್ರತಿಭಟನಾ ಸ್ಥಳಕ್ಕೆ ಕೊಳ್ಳೇಗಾಲ ಉಪ ವಿಭಾಗ ಅಧಿಕಾರಿ ಮಹೇಶ್ ಭೇಟಿ ನೀಡಿ ರೈತರ ಅಹವಾಲು ಸ್ವೀಕರಿಸಿ ಮಾತನಾಡಿ ಒಂದು ವಾರದೊಳಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ರೈತ ಮುಖಂಡರುಗಳ ಜೊತೆ ಚರ್ಚೆ ನಡೆಸಿ ಸಮಸ್ಯೆ ಬಗೆಹರಿಸಲು ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದ ನಂತರ ರೈತ ಮುಖಂಡರುಗಳು ಪ್ರತಿಭಟನೆ ಹಿಂಪಡೆದರು.
ಟ್ರಾಫಿಕ್ ಜಾಮ್: ರೈತ ಮುಖಂಡರುಗಳು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಸ್ತೆ ತಡೆ ನಡೆಸುತ್ತಿದ್ದ ಹಿನ್ನೆಲೆ ತಮಿಳುನಾಡಿಗೆ ತೆರಳುತ್ತಿದ್ದ ವಾಣಿಜ್ಯ ಸರಕು ಸಾಗಣೆಯ ಲಾರಿಗಳು, ಬಸ್, ದ್ವಿಚಕ್ರವಾಹನ ಸೇರಿದಂತೆ ಇನ್ನಿತರ ವಾಹನಗಳು ಸಾಲುಗಟ್ಟಿ ನಿಂತಿದ್ದರಿಂದ ಸುಮಾರು ನಾಲ್ಕು ಗಂಟೆಗಳ ಕಾಲ ನಾಲ್ ರೋಡ್‌ನಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೊಳ್ಳೇಗಾಲ ಉಪ ವಿಭಾಗ ಡಿವೈಎಸ್ಪಿ ಸೋಮೇಗೌಡ, ರಾಮಪುರ ವೃತ್ತ ನಿರೀಕ್ಷಕ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ಪ್ರತಿಭಟನೆಯಲ್ಲಿ ರೈತ ಸಂಘ ಜಿಲ್ಲಾಧ್ಯಕ್ಷ ಶಾಂತಮಲ್ಲಪ್ಪ, ಪ್ರಧಾನ ಕಾರ್ಯದರ್ಶಿ ಭಾಸ್ಕರ್, ತಾಲೂಕು ಗೌರವಾಧ್ಯಕ್ಷ ರಾಜೇಂದ್ರ ಸೇರಿದಂತೆ ರಾಮಪುರ, ನಾಲ್ ರೋಡ್, ಮಾರ್ಟಳ್ಳಿ, ಜಲ್ಲಿಪಾಳ್ಯ ಕೂಡ್ಲೂರು, ಬಿದರಳ್ಳಿ, ಸಂದನ ಪಾಳ್ಯ, ಹೂಗ್ಯಂ ಸುಳ್ಳಾಡಿ ಸೇರಿದಂತೆ ಇನ್ನಿತರ ಗ್ರಾಮಗಳ ರೈತರುಗಳು ಪಾಲ್ಗೊಂಡಿದ್ದರು.