Mysore
27
scattered clouds

Social Media

ಶನಿವಾರ, 21 ಡಿಸೆಂಬರ್ 2024
Light
Dark

ಮಂಗಳೂರು ಕುಕ್ಕರ್‌ಬಾಂಬ್ ಸ್ಫೋಟ: ಮೈಸೂರಿನಲ್ಲಿ ತನಿಖೆ ಚುರುಕು

ಮೈಸೂರು: ಮಂಗಳೂರು ಕುಕ್ಕರ್‌ಬಾಂಬ್ ಸ್ಫೋಟಕ್ಕೆ ಸಂಬಂಧಪಟ್ಟಂತೆ ಮಂಗಳೂರು ಪೊಲೀಸರೇ ಮೈಸೂರಿನಲ್ಲಿ ತನಿಖೆ ನಡೆಸಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ. ಶಾರಿಖ್ ಸಹಚರ ಎನ್ನಲಾದ ರಾಜೀವನಗರದ ಕ್ರಿಶ್ಚಿಯನ್ ಕಾಲೋನಿಯ ಮೊಹಮ್ಮದ್ ರೂರುಲ್ಲಾನನ್ನು ಮಂಗಳೂರು ಪೊಲೀಸರು ನಗರದಲ್ಲಿರುವ ಆತನ ಮನೆಗೆ ಕರೆತಂದು ಪರಿಶೀಲನೆ ಮಾಡಿದ್ದಾರೆ ಎನ್ನಲಾಗಿದ್ದು, ಮನೆಯಲ್ಲಿ ಏನು ಸಿಕ್ಕಿಲ್ಲ ಎಂದು ಪೊಲೀಸ ಮೂಲಗಳು ತಿಳಿಸಿವೆ.

ಇನ್ನು ಶಾರಿಖ್ ಲೋಕನಾಯಕನಗರದಲ್ಲಿ ಬಾಡಿಗೆ ರೂಮ್ ಮಾಡುವ ಮುನ್ನ ಕೆಲವು ದಿನಗಳು ಮೊಹಮ್ಮದ್ ರೂರುಲ್ಲಾ ಮನೆಯಲ್ಲಿ ಇದ್ದ. ಆನಂತರ ಲೋಕನಾಯಕನಗರದಲ್ಲಿ ನಕಲಿ ಆಧಾರ್ ಕಾರ್ಡ್ ನೀಡಿ ಪ್ರೇಮರಾಜ್ ಹೆಸರಿನಲ್ಲಿ ರೂಮ್ ಬಾಡಿಗೆ ಪಡೆದಿದ್ದ ಎನ್ನಲಾಗಿದೆ.

ಇನ್ನು ಸುಮಾರು ೧೦ಕ್ಕೂ ಹೆಚ್ಚು ಮೊಬೈಲ್ ಪೋನ್‌ಗಳನ್ನು ಶಾರಿಖ್‌ಗೆ ನೀಡಿದ್ದ ಎನ್ನಲಾದ ಸೈಯದ್ ಮೊಹಮದ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ ಎನ್ನಲಾಗಿದೆ.

ಶಾರಿಖ್ ಮೊಬೈಲ್ ರಿಪೇರಿ ಕಲಿಯುತ್ತಿದ್ದ ಎನ್ನಲಾದ ಅಗ್ರಹಾರದ ಮೊಬೈಲ್ ರಿಪೇರಿ ತರಬೇತಿ ಕೇಂದ್ರವೊಂದರ ಮಾಲೀಕನನ್ನು ಪೊಲೀಸರು ವಿಚಾರಣೆ ಮಾಡಿದ್ದು, ಶಾರಿಖ್ ಮತ್ತು ಸೈಯದ್ ಮೊಹಮದ್ ಇಬ್ಬರು ಒಟ್ಟಿಗೆ ಮೊಬೈಲ್ ರಿಪೇರಿ ತರಬೇತಿಗೆ ಸೇರಿದ್ದರು. ಸೈಯದ್ ಮೊಹಮದ್ ತರಬೇತಿಯನ್ನು ಪೂರ್ಣ ಮಾಡಿ, ಪ್ರಮಾಣ ಪತ್ರವನ್ನು ಪಡೆದಿದ್ದ. ಆದರೆ, ಶಾರಿಖ್ ತರಬೇತಿ ಪೂರ್ಣವಾಗಿರಲಿಲ್ಲ ಎನ್ನಲಾಗಿದೆ.

ಶಾರಿಖ್‌ಗೆ ಮನೆ ಬಾಡಿಗೆ ನೀಡಿದ್ದ ಮಾಲೀಕ ಲೋಕನಾಯಕನಗರದ ಮೋಹನ್ ಕುಮಾರ ಅನ್ನು ವಿಚಾರಣೆ ಮಾಡಿದ್ದು, ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿಲ್ಲ. ಶಾರಿಖ್ ಇದ್ದ ರೂಮ್ ಅನ್ನು ಮೊದಲಿಗೆ ೫೦೦ ರೂ.ಗೆ ಬಾಡಿಗೆ ನೀಡಲಾಗಿತ್ತು. ಪ್ರೇಮರಾಜ್ ಹೆಸರಿನ ಶಾರಿಖ್ ೧೮೦೦ ರೂ. ಬಾಡಿಗೆ ನೀಡುತ್ತಿದ್ದ. ಬಾಡಿಗೆ ಹಣ ನೀಡಲು ಸತಾಯಿಸುತ್ತಿದ್ದ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ತನಿಖೆ ಉದ್ದೇಶದಿಂದ ಶಾರಿಖ್ ಇದ್ದ ರೂಮ್ ಬೀಗಹಾಕಿ ಸೀಲ್ ಮಾಡಲಾಗಿದೆ ಎನ್ನಲಾಗಿದೆ.

 

ಕೊಯಂಬುತ್ತೂರಿನಲ್ಲಿ ಆಗಿದ್ದ ಬ್ಲಾಸ್ಟ್‌ಗೆ ಸಂಬಂಧ ಮೈಸೂರಿನ ನಂಟು ಏನಾದರೂ ಇದೆಯೇ? ಎಂಬ ಹಿನ್ನೆಲೆಯಲ್ಲಿ ಸೋಮವಾರ ತಮಿಳುನಾಡಿನ ಪೊಲೀಸರು ಮೈಸೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ. ಅಕ್ಟೋಬರ್‌ನಲ್ಲಿ ಕೊಯಂಬುತ್ತೂರಿನಲ್ಲಿ ಮಾರುತಿ ೮೦೦ ಕಾರ್ ಒಂದು ಬ್ಲಾಸ್ಟ್ ಆಗಿತ್ತು. ಈ ಪ್ರಕರಣದಲ್ಲಿ ಒಬ್ಬರು ಮೃತಪಟ್ಟಿದ್ದರು. ಸಧ್ಯ ಇದನ್ನು ರಾಷ್ಟ್ರೀಯ ತನಿಖಾ ದಳ ತನಿಖೆ ಮಾಡುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ