ಮಂಡ್ಯ: ಕೆ.ಆರ್.ಎಸ್.ನಲ್ಲಿ ರಾಜ್ಯ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿಗೆ ರೈತರು ಪ್ರಬಲವಾಗಿ ವಿರೋಧಿಸುತ್ತಿರುವುದು ಸಮಂಜಸವಾಗಿದೆ. ರೈತರ ಹೋರಾಟಕ್ಕೆ ನನ್ನ ಬೆಂಬಲವೂ ಇದೆ ಎಂದು ಯದುವೀರ್ ಶ್ರೀಕೃಷ್ಣದತ್ತ ಒಡೆಯರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ಆರ್.ಎಸ್. ಅಣೆಕಟ್ಟೆಗೆ ೧೦೦ ವರ್ಷ ಸಂಭವಿಸುತ್ತಿದೆ. ಅಣೆಕಟ್ಟೆಯ ಭದ್ರತೆ ದೃಷ್ಟಿಯಿಂದ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಒಳ್ಳೆಯದಲ್ಲ. ಇದರಿಂದ ಕೆ.ಆರ್.ಎಸ್. ಸುತ್ತಮುತ್ತಲಿನ ಪರಿಸರಕ್ಕೂ ಧಕ್ಕೆಯಾಗಲಿದೆ. ಈ ಯೋಜನೆಗಳಿಂದೇನೂ ಕೆ.ಆರ್.ಎಸ್. ಪ್ರಸಿದ್ಧಿಯಾಗಬೇಕಿಲ್ಲ. ಈಗಾಗಲೇ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ ಎಂದರು.
ಸರ್ಕಾರ ರೈತರ ಹೋರಾಟದ ಧ್ವನಿಯನ್ನು ಪರಿಗಣಿಸಿ, ಕೆ.ಆರ್.ಎಸ್. ಹೊರತುಪಡಿಸಿ ಮಳವಳ್ಳಿ ತಾಲ್ಲೂಕಿನ ಶಿಂಷಾ ಬ್ಲಫ್ ಅಥವಾ ಬೇರೆ ಸ್ಥಳಗಳಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡಲಿ. ಕೆ.ಆರ್.ಎಸ್.ನಲ್ಲಿ ಯಾವುದೇ ಕಾರಣಕ್ಕೂ ನಿರ್ಮಾಣ ಮಾಡಬಾರದು ಎಂದು ಹೇಳಿದರು.
ಕಾವೇರಿ ಆರತಿಯನ್ನು ನಾವೇ ಮಾಡುತ್ತೇವೆ:
ಸಂಸ್ಕೃತಿಯಿಂದ ಬಂದಿರುವುದು ನಮ್ಮ ಮಂಡ್ಯ. ಹೊಸ ಪದ್ಧತಿ ಬೇಡ, ಕಾವೇರಿ ಆರತಿಗೆ ೯೨ ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಇದಕ್ಕೆ ಇಷ್ಟು ವೆಚ್ಚ ಬೇಕಾ ಎಂಬುದೇ ನನಗೂ ಆಶ್ಚರ್ಯವಾಗಿದೆ. ಬಿಜೆಪಿಯವರೇ ಕಡಿಮೆ ವೆಚ್ಚದಲ್ಲಿ ಕಾವೇರಿ ಆರತಿ ಮಾಡಿಕೊಡುತ್ತೇವೆ. ಹೊಸ ಪದ್ಧತಿ ಬೇಡ ಎಂದರು.




