ಮದ್ದೂರು: ಹುಯ್ಯೋ ಹುಯ್ಯೋ ಮಳೆರಾಯ ತೆಂಗಿನ ತೋಟಕೆ ನೀರಿಲ್ಲ, ಬಾರೋ ಬಾರೋ ಮಳೆರಾಯ ಬಾಳೆಯ ತೋಟಕೆ ನೀರಿಲ್ಲ, ಬಾರಪ್ಪ ಮಳೆರಾಯ ಕೆರೆ ಕಟ್ಟೆಗಳಿಗೆ ನೀರಿಲ್ಲ, ಇಂತಹ ಘೋಷಣೆಗಳೊಂದಿಗೆ ವಳಗೆರೆಹಳ್ಳಿ ಗ್ರಾಮದಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಳೆರಾಯನ ಮತ್ತು ಗಂಗಾಮಾತೆಯ ಮಣ್ಣಿನ ಪ್ರತಿಮೆ ಮಾಡಿ ವಿಶೇಷವಾದ ಅಲಂಕಾರಗಳೊಂದಿಗೆ ಎರಡು ದೇವತೆಗಳನ್ನು ತಲೆಯ ಮೇಲೆ ಹೊತ್ತು ಗ್ರಾಮದ ಪ್ರತಿ ಬೀದಿಗಳಲ್ಲಿ ಮನೆ ಮನೆಗೂ ತೆರಳಿದರು. ಮಳೆರಾಯ ಮತ್ತು ಗಂಗಾಮಾತೆಯನ್ನು ಹೊತ್ತಿರುವ ವ್ಯಕ್ತಿಗಳಿಗೆ ಮಾತೆಯರು ಬಿಂದಿಗೆಗಳಿಂದ ನೀರು ಹೂಯ್ದು, ಅರಿಶಿಣ, ಕುಂಕುಮವಿಟ್ಟು, ತೆಂಗಿನ ಕಾಯಿಗಳಿಂದ ಈಡುಗಾಯಿ ಒಡೆದು, ಹೂವು ಹಣ್ಣು ಗಂಧದಕಡ್ಡಿ ಕರ್ಪೂರಗಳಿಂದ ಪೂಜೆ ಸಲ್ಲಿಸಿ, ಮನ ತುಂಬಿ ಪ್ರಾರ್ಥಿಸುವ ದೃಶ್ಯ ಮಳೆರಾಯನಿಗೆ ಸಲ್ಲುತ್ತಿರುವ ಪೂಜೆ ವಿಶೇಷವಾಗಿತ್ತು.
ಈ ವೇಳೆ ಮಾತನಾಡಿದ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ವಿ.ಸಿ.ಉಮಾಶಂಕರ, ಗ್ರಾಮದ ಯುವಕ ಮಿತ್ರರು ಮಳೆಗಾಗಿ ಮಳಾರಾಯನ ಪೂಜೆ ಸಲ್ಲಿಸುತ್ತಿರುವುದು ಶ್ಲಾಘನೀಯ ಮತ್ತು ವಿಶೇಷ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲೇ ವರುಣದೇವನ ಕೃಪೆಯಿಂದ ಸಾಕಷ್ಟು ಮಳೆ ಬಂದು ಕೆರೆಕಟ್ಟೆಗಳು ಹಾಗೂ ಜಲಾಶಯಗಳು ತುಂಬಿ ತುಳುಕಾಡುತ್ತಿದ್ದವು.
ಆದರೆ ಪ್ರಸ್ತುತ ವರ್ಷ ಮಳೆ ಕೊರತೆಯಿಂದ ಅಂತರ್ಜಲ ಕುಸಿತದಿಂದ ಅದೆಷ್ಟೋ ಬೋರ್ವೆಲ್‌ಗಳು ನೀರಿಲ್ಲದೆ ಕೆಟ್ಟು ನಿಂತಿವೆ. ಅರಣ್ಯಗಳಲ್ಲಿ ವಾಸಿಸುವ ಪ್ರಾಣಿ ಪಕ್ಷಿ ಸಂಕುಲಗಳು ನೀರು ಮತ್ತು ಆಹಾರವನ್ನು ಹುಡುಕಿ, ಗ್ರಾಮಗಳತ್ತ ಧಾವಿಸುತ್ತಿರುವುದು ವಿಷಾದನೀಯ. ತಾಪಮಾನ ತೀವ್ರ ಉಷ್ಣಾಂಶವಿರುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಪರಿಣಾಮ ಬೀರಿ, ಉಸಿರಾಟ ಮತ್ತು ರಕ್ತದೊತ್ತಡದಂತಹ ಮಾರಣಾಂತಿಕ ಕಾಯಿಲೆಗಳು ಸಂಭವಿಸಿ, ಚಿಕಿತ್ಸೆಗಾಗಿ ಆಸ್ಪತ್ರೆಗಳು ಭರ್ತಿಯಾಗಿವೆ. ಬಾಳೆ ಅಡಿಕೆ ಹಿಪ್ಪುನೇರಳೆ, ಕಬ್ಬು, ರಾಗಿ ಬೆಳೆಗಳು ಒಣಗಿ ನಿಂತಿವೆ. ತೆಂಗಿನ ಮರದ ಸುಳಿಗಳು ಒಣಗಿ ನಿಂತಿವೆ. ಆದ್ದರಿಂದ ಸರ್ಕಾರ ಪ್ರಕೃತಿ ವಿಕೋಪದಡಿ ಬರ ಪರಿಹಾರದ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.
ಮುಖಂಡ ಶಂಕರ ಮಾತನಾಡಿ, ಮಳೆ ರಾಯನ ಪೂಜೆ ಸಲ್ಲಿಸಿ ದವಸ ಧಾನ್ಯಗಳನ್ನು ಪಡೆದು ಅನ್ನ ಸಂತರ್ಪಣೆಯ ಕಾರ್ಯಕ್ರಮವನ್ನು ಸಹ ಆಯೋಜಿಸಿದ್ದೇವೆ ಎಂದು ತಿಳಿಸಿದರು
ಈ ವೇಳೆ ಆಯೋಜಕರಾದ ಗುಂಡ, ಮಹೇಶ್, ಪ್ರಸನ್ನ, ನಂದೀಶ್, ಸಚಿನ್, ರಾಮಣ್ಣ, ವೆಂಕಟೇಶ್, ಸೋಮು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.





