Mysore
18
overcast clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಜನವರಿ.10 ರಿಂದ 18 ದಿನಗಳ ಕಾಲ ಕಟ್ಟು ಪದ್ಧತಿಯಲ್ಲಿ ನೀರು: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ

ಮಂಡ್ಯ: ಕೆಆರ್‌ಎಸ್‌ನಿಂದ ಬೆಳೆಗಳಿಗೆ ಜನವರಿ.10 ರಿಂದ 18 ದಿನಗಳ ಕಾಲ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲಾಗುವುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.

ಈ ಬಗ್ಗೆ ಮಂಡ್ಯದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಕಾಲ್ಗುಣ ಸರಿಯಿಲ್ಲ ಎಂದು ಟೀಕೆ ಮಾಡುತ್ತಿದ್ದರು. ನಮ್ಮದೇ ಸರ್ಕಾರದಲ್ಲಿ ಕೆಆರ್‌ಎಸ್ ತನ್ನ ಭಾಗ್ಯ ತೋರಿದೆ. ಕಳೆದ ಆರು ತಿಂಗಳು ನಾಲೆಗಳಿಗೆ ನೀರು ಹರಿಸಲಾಗಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶಕ್ಕಿಂತ ಹೆಚ್ಚುವರಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ. ಇದಾಗಿಯೂ ಜಲಾಶಯ ಸಂಪೂರ್ಣ ಭರ್ತಿ ಇದ್ದು 124.30 ಅಡಿ ಪ್ರಸ್ತುತ ನೀರಿನ ಮಟ್ಟ ಇದೆ ಎಂದು ಮಾಹಿತಿ ನೀಡಿದರು.

ಇನ್ನು ಜನವರಿ.10ರಿಂದಲೇ ಕಟ್ಟು ಪದ್ಧತಿಯಂತೆ ನೀರು ಬಿಡಲು ನಿರ್ಧರಿಸಲಾಗಿದೆ. ನಾಲ್ಕು ಕಟ್ಟು ನೀರು ಬಿಡಲಾಗುವುದು. ಅದಷ್ಟೂ ಬೇಗ ರೈತರು ನಾಟಿ ಮಾಡಲು ಮುಂದಾಗುವಂತೆ ಸಲಹೆ ನೀಡಿದರು.

ತಿಂಗಳಲ್ಲಿ 18 ದಿನಗಳು ನೀರು ಹರಿಸಲಾಗುವುದು. 12 ದಿನಗಳು ನೀರನ್ನು ನಿಲ್ಲಿಸಲಾಗುವುದು. ನಾಲೆಯ ಪ್ರಾರಂಭದಿಂದ ಕೊನೆ ಭಾಗದ ರೈತರು ಏಕಕಾಲದಲ್ಲಿ ನಾಟಿಗೆ ಮುಂದಾಗಬೇಕು. ಮುಂದೆ ಯಾವ ಪರಿಸ್ಥಿತಿ ಎದುರಾಗುತ್ತದೆ ಎಂದು ಗೊತ್ತಿಲ್ಲ. ಅಲ್ಪಾವಧಿ ಬೆಳೆ ಬೆಳೆಯಲು ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಈಗ ಮುಖ್ಯ ನಾಲೆಗಳ ದುರಸ್ತಿ ಕಾರ್ಯ ಮಾಡಲು ಸಾಧ್ಯವಿಲ್ಲ. ಸಂಪರ್ಕ ನಾಲೆಗಳ ದುರಸ್ಥಿಗೆ ಅವಕಾಶವಿದೆ. ಆದ್ಯತೆ ಮೇರೆಗೆ ನಾಲಾ ಕೆಲಸ ಮಾಡಲಾಗುವುದು. ಜೂನ್ ಅಂತ್ಯದವರೆಗೂ ಕುಡಿಯಲು ಹಾಗೂ ಬೆಳೆಗಳಿಗೆ ನೀರು ಸಾಕಾಗಲಿದೆ. ಜಿಲ್ಲೆಯ ನಾಲೆಗಳ ಆಧಾರಿತ ಶೇಕಡಾ.100ರಷ್ಟು ಕೆರೆಗಳು ತುಂಬಿವೆ ಎಂದು ಮಾಹಿತಿ ನೀಡಿದರು.

 

Tags:
error: Content is protected !!