Mysore
22
mist

Social Media

ಮಂಗಳವಾರ, 06 ಜನವರಿ 2026
Light
Dark

ಕೋರಮಂಡಲ ಸಕ್ಕರೆ ಕಾರ್ಖಾನೆ ನಿಯಮ ಉಲ್ಲಂಘನೆ: ಹೇಮಾವತಿ ನದಿಗೆ ತ್ಯಾಜ್ಯದ ಕಲುಷಿತ ನೀರು

ಕೆ.ಆರ್.ಪೇಟೆ : ತಾಲ್ಲೂಕಿನ ಮಾಕವಳ್ಳಿಯ ಕೋರಮಂಡಲ ಸಕ್ಕರೆ ಕಾರ್ಖಾನೆ ನಿಯಮ ಉಲ್ಲಂಘಿಸಿ ಅಪಾಯಕಾರಿ ತ್ಯಾಜ್ಯದ ನೀರನ್ನು ಹೇಮಾವತಿ ನದಿ ಒಡಲಿಗೆ ವಿಸರ್ಜಿಸುತ್ತಿರುವ ಪರಿಣಾಮ ನದಿ ನೀರು ಕಲುಷಿತಗೊಳ್ಳುತ್ತಿದೆ.
ಕಾರ್ಖಾನೆ ಪ್ರತಿ ದಿನ ಸುಮಾರು ನಾಲ್ಕು ಸಾವಿರ ಟನ್ ಕಬ್ಬನ್ನು ಹರಿಯುವ ಸಾಮರ್ಥ್ಯವಿದ್ದು ಸಕ್ಕರೆ ಉತ್ಪಾದನೆ ವೇಳೆ ತ್ಯಾಜ್ಯವಾಗಿ ಬರುವ ಅಪಾಯಕಾರಿ ರಾಸಾಯನಿಕ ಅಂಶವುಳ್ಳ ಮಲಿನ ದ್ರವ ತ್ಯಾಜ್ಯವನ್ನು ಸಂಸ್ಕರಿಸದೇ ಕಾರ್ಖಾನೆ ಹರಿಯಬಿಡುತ್ತಿದೆ.

ಕಲುಷಿತಗೊಂಡಿರುವ ನೀರನ್ನು ಕೃಷಿ ಮತ್ತು ಕಡಿಯುವ ನೀರು ಪೂರೈಕೆಗೆ ಬಳಸುತ್ತಿರುವುದರಿಂದ ಕೃಷಿ ಬೆಳೆಗಳಲ್ಲಿ ಇಳುವರಿ ಕಡಿಮೆಯಾಗುತ್ತಿರುವುದಲ್ಲದೇ ಜನರ ಆರೋಗ್ಯದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ.

ಈ ಭಾಗದ ಜನ ಕಾರ್ಖಾನೆ ವಿರುದ್ಧ ಹಲವು ರೀತಿಯ ಹೋರಾಟ ಮಾಡಿ ತ್ಯಾಜ್ಯ ಬಿಡದಂತೆ ನಿಯಂತ್ರಿಸಿದ್ದರು. ಜನಾಕ್ರೋಶಕ್ಕೆ ಬೆದರಿದ ಕಾರ್ಖಾನೆ ಕೆಲವು ವರ್ಷಗಳ ಕಾಲ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕಾರ್ಖಾನೆಯ ವ್ಯಾಪ್ತಿಯಲ್ಲಿರುವ ಕೇನ್ ಫಾರಂನಲ್ಲಿರುವ ಕಬ್ಬು, ತೆಂಗಿಗೆ ಬಿಡುತ್ತಿತ್ತು. ಆದರೆ ತ್ಯಾಜ್ಯ ನೀರನ್ನು ಸಂಸ್ಕರಿಸುವುದರಿಂದ ಕಾರ್ಖಾನೆಗೆ ಆದಾಯವಿಲ್ಲ.

ತ್ಯಾಜ್ಯ ನೀರು ಬಿಡಲು ಕಾರ್ಖಾನೆ ಕಾಂಪೌಂಡಿಗೆ ಪಿವಿಸಿ ಪೈಪ್‍ಗಳನ್ನು ನೆಲಮಟ್ಟದಲ್ಲಿ ಅಕ್ರಮವಾಗಿ ಅಳವಡಿಸಿದೆ. ಕಾಂಪೌಂಡ್‍ಗೆ ಪೈಪ್ ಅಳವಡಿಸುವ ಉದ್ದೇಶವಾದರೂ ಏನು ಎಂದು ಪ್ರಶ್ನಿಸಿರುವ ತಾಲ್ಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಕಾರ್ಖಾನೆಯ ಮೊಲಾಸಿಸ್ ಸ್ಟೋರೆಜ್ ಟ್ಯಾಂಕ್ ಬಳಿಯ ಕಾಂಪೌಂಡ್‍ಗೆ ತ್ಯಾಜ್ಯ ನೀರನ್ನು ಹೊರಬಿಡಲೆಂದೆ ನೆಲಮಟ್ಟದಲ್ಲಿ 2.5 ಇಂಚಿನ ಹಲವು ಪಿವಿಸಿ ಪೈಪ್‍ಗಳನ್ನು ಉದ್ದೇಶಪೂರಕವಾಗಿಯೇ ಅಳವಡಿಸಿದ್ದಾರೆ.

ಕಾರ್ಖಾನೆಯ ಕೆಳಭಾಗದಲ್ಲಿರುವ ಹೇಮಗಿರಿಯಿಂದ ಹೇಮಾವತಿ ನದಿ ನೀರನ್ನು ಕೆ.ಆರ್.ಪಟ್ಟಣದ 30 ಸಾವಿರಕ್ಕೂ ಅಧಿಕ ಜನ ಕುಡಿಯಲು ಬಳಸುತ್ತಾರೆ. ಇದಲ್ಲದೆ ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ 25 ಗ್ರಾಮಗಳು, ಬೂಕನಕೆರೆ ಹೋಬಳಿಯ 21 ಗ್ರಾಮಗಳು, ನೆರೆಯ ಕೆ.ಆರ್.ನಗರದ ತಾಲ್ಲೂಕಿನ  ಗುಳುವಿನ ಅತ್ತಿಗುಪ್ಪೆ ಮತ್ತು ಅದರ ಸುತ್ತಮುತ್ತಲ 31 ಗ್ರಾಮಗಳಿಗೆ ಬಹು ಗ್ರಾಮ ಕುಡಿಯುವ ನೀರು ಯೋಜನೆಯ ಮೂಲಕ ಹೇಮಾವತಿ ನೀರು ಪೂರೈಕೆ ಮಾಡುತ್ತಿದ್ದು ಅಲ್ಲಿನ ಜನರು ಮಲೀನಯುಕ್ತ ನೀರನ್ನು ಸೇವಿಸುವಂತಾಗಿದೆ.

ತಕ್ಷಣವೇ ಕ್ಷೇತ್ರದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಖಾನೆಯ ವಿರುದ್ದ ಕ್ರಮ  ಜರುಗಿಸಿ ಜನರ ಆರೋಗ್ಯ ಮತ್ತು ರೈತರ ಕೃಷಿಯನ್ನು ಸಂರಕ್ಷಿಸುವಂತೆ ಕಾರಿಗನಹಳ್ಳಿ ಪುಟ್ಟೇಗೌಡ ಒತ್ತಾಯಿಸಿದ್ದಾರೆ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!