ಮಂಡ್ಯ : ನಾಲೆಗಳ ಬಳಿ ಅಪಘಾತ ಸ್ಥಳಗಳನ್ನು ಗುರುತಿಸಿ ತಡೆಗೋಡೆ ನಿರ್ಮಿಸಲು ರೈತರು, ಶಾಸಕರು, ಸಂಘಟನೆಗಳು ಒಟ್ಟಾಗಿ ಸೇರಿ ಚಿಂತಿಸಬೇಕಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು.
ಅವರು ಇಂದು ಮಿಮ್ಸ್ ನಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಗಾಮನಹಳ್ಳಿ ಬಳಿ ಇರುವ ನಾಲೆಗೆ ಕಾರು ಪಲ್ಟಿಯಾಗಿ ಮೃತಪಟ್ಟವರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಕುಟುಂಬಸ್ಥರಿಗೆ ವೈಯಕ್ತಿಕವಾಗಿ 50,000 ರೂ. ಪರಿಹಾರ ನೀಡಿದರು.
ಇದೇ ವೇಳೆ ಮಾತನಾಡಿದ ಅವರು ಅಪಘಾತ ಉಂಟಾಗಬಹುದಾದ ಸ್ಥಳಗಳನ್ನು ಗುರುತಿಸಿ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ ಎಂದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಹೆಚ್ಚಿನ ಅಪಘಾತವಾಗುತ್ತಿತ್ತು, ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಹಲವಾರು ಸಭೆ ನಡೆಸಿ ಕ್ರಮ ಕೈಗೊಂಡು ಅಪಘಾತಗಳ ಸಂಖ್ಯೆ ಕಡಿಮೆಯಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಶಾಸಕರಾದ ರವಿಕುಮಾರ್, ರಮೇಶ್ ಬಾಬು ಬಂಡೀಸಿದ್ದೇಗೌಡ, ಜಿಲ್ಲಾಧಿಕಾರಿ ಡಾ: ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಮಿಮ್ಸ್ ನಿರ್ದೇಶಕ ಡಾ: ಮಹೇಂದ್ರ ಹಾಜರಿದ್ದರು.





