ಮಂಡ್ಯ: ದೇಶದ ಗ್ರಾಮೀಣ ಭಾಗದ ಜನರ ಜೀವನಾಡಿ ಮನರೇಗಾ ಯೋಜನೆಯನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ವಿಬಿ ಜೀ ರಾಮ್ ಜೀ ಹೆಸರಿಗೆ ಬದಲಾಯಿಸುತ್ತಿದೆ ಎಂದು ರಾಜ್ಯಸಭೆ ಸದಸ್ಯ ವಿ.ಶಿವದಾಸನ್ ಆರೋಪಿಸಿದ್ದಾರೆ.
ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮನರೇಗಾ ಗಾಂಧೀಜಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಗ್ರಾಮೀಣರಿಗೆ ಉದ್ಯೋಗದ ಗ್ಯಾರಂಟಿ ನೀಡುತ್ತಿದ್ದ ಯೋಜನೆಯನ್ನು ರದ್ದುಗೊಳಿಸುವ ಹುನ್ನಾರ ಇದಾಗಿದೆ ಎಂದು ಹೇಳಿದರು.
ಈ ಯೋಜನೆಯನ್ನು ವಿಬಿ ಜೀ ರಾಮ್ ಜೀ ಎಂದು ಹೆಸರಿಸಿ ರಾಜ್ಯ ಸರ್ಕಾರಗಳ ಮೇಲೆ ಹೊರೆ ಹಾಕಲಾಗುತ್ತಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಮನರೇಗಾ ಯೋಜನೆಯ ಅನುದಾನ ಕಡಿತ ಮಾಡುವ ಕೆಲಸದಲ್ಲಿ ತೊಡಗಿದೆ. ಇದೀಗ ಶೇಕಡಾ.60ರಷ್ಟು ಕೇಂದ್ರ ಸರ್ಕಾರ ಹಾಗೂ ಶೇಕಡಾ.40ರಷ್ಟನ್ನು ರಾಜ್ಯ ಸರ್ಕಾರಗಳು ಭರಿಸುವಂತೆ ಬಿಲ್‌ನಲ್ಲಿ ಸೂಚಿಸಲಾಗಿದೆ ಎಂದು ಹೇಳಿದರು.



