ಮಂಡ್ಯ: ಎಂಟು ವಿಧಾನಸಭಾ ಕ್ಷೇತಗಳನ್ನೊಳಗೊಂಡಿರುವ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಮ್ಮ ಕ್ಷೇತ್ರ ನಮ್ಮ ಗ್ಯಾರಂಟಿಯಡಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಇಂದು(ಏ.21) ಮಂಡ್ಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಮ್ಮ ಕ್ಷೇತ್ರ ನಮ್ಮ ಗ್ಯಾರಂಟಿ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, ಮಂಡ್ಯದಲ್ಲಿ ಸಾಫ್ಟ್‌ವೇರ್ ಪಾರ್ಕ್ ನಿರ್ಮಾಣ, ಪ್ರವಾಸೋದ್ಯಮ ಅಭಿವೃದ್ಧಿ, ಕೋಲ್ಡ್ ಸ್ಟೋರೇಜ್ ಸ್ಥಾಪನೆ, ನಾಲೆಗಳ ಆಧುನಿಕರಣ, ಹೊಸ ಸೇತುವೆ ನಿರ್ಮಾಣ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದರು.
ಕ್ಷೇತ್ರ ವ್ಯಾಪ್ತಿಯಲ್ಲಿ ನೀರಾವರಿ ಯೋಜನೆ ಜಾರಿ, ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆ, ಯುವಕರಿಗೆ ಉದ್ಯೋಗ ಸೃಷ್ಠಿ, ಹಣ್ಣು ತರಕಾರಿಗಳ ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಮದ್ದೂರು ಪಟ್ಟಣ ನವೀಕರಣಕ್ಕೆ ಆದ್ಯತೆ, ಮಳವಳ್ಳಿಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ, ನಾಗಮಂಗಲಕ್ಕೆ ಕೆರೆ ತುಂಬಿಸುವ ಯೋಜನೆ, ಗಾರ್ಮೆಂಟ್ಸ್ ಸ್ಥಾಪನೆಗೆ ಒತ್ತು, ಮೇಲುಕೊಟೆ-ಪಾಂಡವಪುರಕ್ಕೆ ಸುಸ್ಥಿರ ಕೃಷಿ ಪದ್ಧತಿ ಜಾರಿ, ಪಂಚಾಯ್ತಿಗೊಂದು ಶಾಲೆ, ಶ್ರೀರಂಗಪಟ್ಟಣದಲ್ಲಿ ಪ್ರವಾಸೋದ್ಯಮಕ್ಕೆ ಒತ್ತು, ಜೊತೆಗೆ ನಾಲೆಗಳ ಆಧುನಿಕರಣ, ಪ್ರತಿ ಗ್ರಾಮಕ್ಕೆ ಮೂಲಸೌಕರ್ಯ, ಕೆ.ಆರ್ ನಗರ ಕಬ್ಬು ಬೆಳೆಗಾರರಿಗೆ ಶಾಶ್ವತ ಪರಿಹಾರ ಸೇರಿದಂತೆ ಹತ್ತು ಹಲವು ಗ್ಯಾರಂಟಿಗಳನ್ನು ಕಾಂಗ್ರೆಸ್ ಘೋಷಿಸಿದೆ.