ಮಂಡ್ಯ: ಬದಲಾವಣೆ ಪ್ರಕೃತಿಯ ನಿಯಮ. ಕೃಷಿ ಪದ್ಧತಿ ಎಂದರೆ ಕಷ್ಟವಾದ ಕೆಲಸ, ಸಾಲ ಮಾಡಬೇಕು, ನಷ್ಟ ಅನುಭವಿಸಬೇಕು ಎಂಬ ಮನೋಭಾವವನ್ನು ತೊರೆಯಬೇಕು. ಕೃಷಿಯಲ್ಲಿ ತಾಂತ್ರಿಕತೆ ಹಾಗೂ ಕೃಷಿ ಯಂತ್ರೋಪಕರಣಗಳನ್ನು ಬಳಸಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಅವರು ಇಂದು ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ, ಮಂಡ್ಯ ಇಲ್ಲಿ ಕಬ್ಬು, ಭತ್ತ, ರಾಗಿ ಬೆಳೆಗಳ ಬಗ್ಗೆ ವಿಶೇಷ ತಾಂತ್ರಿಕ ಸಂವಾದ (ಬಿತ್ತನೆಯಿಂದ ಮಾರಾಟದವರೆಗೆ)ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಂಡ್ಯ ಜಿಲ್ಲೆಯು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೃಷಿ ಪದ್ದತಿಯಲ್ಲಿ ಹೆಚ್ಚು ಇಳುವರಿ ಹಾಗೂ ಆರ್ಥಿಕವಾಗಿ ಸದೃಢರಾಗಲು ಅನೇಕ ಹೊಸ ಪದ್ಧತಿಗಳನ್ನು ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಮಹಾವಿದ್ಯಾಲಯಗಳು ಪರಿಚಯಿಸುತ್ತಿದೆ. ರೈತರು ಹೊಸ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು ಎಂದರು.
ಒಂದೇ ರೀತಿಯ ಬೆಳೆಯನ್ನು ಹಲವು ವರ್ಷಗಳು ನಿರಂತರವಾಗಿ ಬೆಳೆದರೆ ಮಣ್ಣು ಪೌಷ್ಟಿಕಾಂಶ ಕಳೆದುಕೊಳ್ಳುವುದರೆ ಜೊತೆಗೆ ಇಳುವರಿ ಸಹ ಕಡಿಮೆಯಾಗುತ್ತದೆ. ಮೂರು ಎಕರೆ ಜಮೀನನ್ನು ಮೂರು ಭಾಗ ಮಾಡಿ ಒಂದೊಂದು ಎಕರೆಯಲ್ಲಿ ಒಂದೊಂದು ಬೆಳೆಯನ್ನು ಬೆಳೆಯಿರಿ. ಮುಂದಿನ ವರ್ಷ ಮೂರು ವಿಭಾಗದಲ್ಲಿ ಬೆಳೆದ ಬೆಳೆಯನ್ನು ಅದಲು ಬದಲು ಮಾಡಿಕೊಳ್ಳಿ ಎಂದರು.
ರೈತರು ಹೊಸ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಹಲವಾರು ಕಾರಣಗಳಿಂದ ಹಿಂಜರಿಯಬಹುದು. ರೈತರು ತಮ್ಮ ಜಮೀನಿನ ಒಂದು ಭಾಗದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬೆಳೆಯನ್ನು ಬೆಳೆಯಿರಿ, ಲಾಭದಾಯಕ ಎಂದು ಮನದಟ್ಟು ಆದ ನಂತರ ಸಂಪೂರ್ಣವಾಗಿ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.





