Mysore
17
scattered clouds

Social Media

ಭಾನುವಾರ, 14 ಡಿಸೆಂಬರ್ 2025
Light
Dark

ಅನಧಿಕೃತವಾಗಿ ಟ್ಯೂಶನ್ ಮಾಡಿದರೆ ನಿರ್ದಾಕ್ಷಿಣ್ಯ ಕ್ರಮ: ಡಿಡಿಪಿಐ ಎಚ್ಚರಿಕೆ

ಮಂಡ್ಯ: ಮಳವಳ್ಳಿಯಲ್ಲಿ ಟ್ಯೂಶನ್ ಕೇಂದ್ರವನ್ನು ನೋಡಿಕೊಳ್ಳುತ್ತಿದ್ದ ಶಿಕ್ಷಕನೇ ಅಪ್ರಾಪ್ತ ಬಾಲಕಿಯ ಮೇಲೆ ದೌರ್ಜನ್ಯ ಎಸಗಿ ಹತ್ಯೆ ಮಾಡಿದ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದ  ಬೆನ್ನಲ್ಲೇ ಎಚ್ಚೆತ್ತುಕೊಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲೆಯಾದ್ಯಂತ ಇರುವ ಅನಧಿಕೃತ ಟ್ಯೂಶನ್ ಸೆಂಟರ್‌ಗಳನ್ನು ತಕ್ಷಣವೇ ಜಾರಿಗೆ ಬರುವಂತೆ ಮುಚ್ಚಲು ಆದೇಶ ನೀಡಿದೆ.

ಮಂಡ್ಯ ಡಿಡಿಪಿಐ ಜವರೇಗೌಡರು ಈ ಬಗ್ಗೆ ಎಲ್ಲಾ ತಾಲ್ಲೂಕು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದು, ಅನಧಿಕೃತ ಟ್ಯೂಶನ್ ಸೆಂಟರ್‌ಗಳನ್ನು ಬಂದ್ ಮಾಡಬೇಕು, ಸರಕಾರಿ, ಅನುದಾನ, ಅನುದಾನ ರಹಿತ ಶಿಕ್ಷಕರು ಅನುಮತಿಯಿಲ್ಲದೇ ಟ್ಯೂಶನ್ ಮಾಡುತ್ತಿದ್ದರೆ ಶಿಸ್ತುಕ್ರಮ ತೆಗೆದುಕೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ಅನುಮತಿ ಪಡೆಯದೇ ಟ್ಯೂಶನ್ ನಡೆಸುತ್ತಿದ್ದರೆ ಅಂತಹ ಸೆಂಟರ್‌ಗಳನ್ನು ನಡೆಸುವವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಡಿಡಿಪಿಐ ತಿಳಿಸಿದ್ದಾರೆ. ಇನ್ನು ಬಿ ಇ ಒ ನೀಡಿದ ವರದಿ ಆಧರಿಸಿ ಮಳವಳ್ಳಿಯಲ್ಲಿ ಅತ್ಯಾಚಾರ ನಡೆದಿದ್ದ ಟ್ಯೂಶನ್ ಸೆಂಟರ್‌ ಅನ್ನು ರದ್ದು ಮಾಡಲು ನಿರ್ಧರಿಸಲಾಗಿದೆ. ಜೊತೆಗೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಟ್ಯೂಶನ್ ಸೆಂಟರ್‌ಗಳನ್ನು ಪತ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಅಧಿಕೃತ ಟ್ಯೂಶನ್ ಮಾಡಬೇಕೆಂದರೆ, ಮೊದಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಕಾಯ್ದೆಯ ಪ್ರಕಾರ 5 ಸಾವಿರ ಠೇವಣಿ ಕಟ್ಟಿ ನೋಂದಣಿ ಮಾಡಿಕೊಳ್ಳಬೇಕು. 1 ಲಕ್ಷ ಭದ್ರತಾ ಠೇವಣಿಯನ್ನು ಇಟ್ಟಿರಬೇಕು. ಇದರ ಜೊತೆಗೆ ಟ್ಯೂಶನ್‌ ಮಾಡುವ ಸ್ಥಳದಲ್ಲಿ ಎಲ್ಲಾ ಮೂಲಭೂತ ಸೌಲಭ್ಯ, ಸಿಸಿ ಟಿವಿ ಕ್ಯಾಮೆರಾ, ಗಾಳಿ-ಬೆಳಕು ಇರುವ ಕಟ್ಟಡ, ಅರ್ಹ ಶಿಕ್ಷಕರ ಹಾಗೂ ಅವರು ಪಾಠ ಮಾಡುವ  ಸಂಪೂರ್ಣ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಿ ಅನುಮತಿ ಮಾಡಬೇಕೆಂದು ಡಿ ಡಿ ಪಿ ಐ ಮಾಹಿತಿ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!