ಮಂಡ್ಯ : ನಾಡಹಬ್ಬ ಮೈಸೂರು ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರನ್ನು ಸರ್ಕಾರ ಆಯ್ಕೆ ಮಾಡಿದೆ. ಸದ್ಯ ಈ ಬಗ್ಗೆ ಕಳೆದೆರಡು ದಿನದಿಂದ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿವೆ. ಬಿಜೆಪಿ ದಸರಾ ಧಾರ್ಮಿಕ ಹಬ್ಬ ಹೀಗಾಗಿ ಅವರ ಆಯ್ಕೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಡಿಸಿದರೆ, ಕಾಂಗ್ರೆಸ್ ದಸರಾ ನಾಡಹಬ್ಬ, ಜಾತ್ಯತೀತ ಹಬ್ಬ ಎಂದು ಸಮರ್ಥಿಸಿಕೊಳ್ಳುತ್ತಿದೆ. ಸದ್ಯ ಈ ವಿಚಾರವಾಗಿ ಮಂಡ್ಯ ಶಾಸಕ ಗಣಿಕ ರವಿಕುಮಾರ್ ಅವರು ಮಾತನಾಡಿ, ವಿರೋಧ ಮಾಡುವವರು ಟೈಮ್ ವೇಸ್ಟ್ ಗಿರಾಕಿಗಳು ಎಂದು ಕಿಡಿಕಾರಿದ್ದಾರೆ.
ದಸರಾ ಉದ್ಘಾಟನೆ ಲೇಖಕಿ ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ವಿರೋಧ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ರವಿಕುಮಾರ್, ಎಲ್ಲದಕ್ಕೂ ವಿರೋಧ ಮಾಡುತ್ತಾರೆ ಬಿಡಿ. ವಿರೋಧ ಮಾಡುವವರು ಟೈಮ್ ವೇಸ್ಟ್ ಗಿರಾಕಿಗಳು. ಅಬ್ದುಲ್ ಕಲಾಂ ಈ ದೇಶದ ರಾಷ್ಟ್ರಪತಿ ಆಗಬಹುದು. ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಬಹುದು.
೯೦ ಕೋಟಿ ಮಹಿಳೆಯರ ಪರವಾಗಿರುವ ಮಹಿಳೆಯನ್ನು ವಿರೋಧ ಮಾಡುತ್ತಾರೆ ಎಂದರೆ ಮಹಿಳೆಯರಿಗೆ ಬಿಜೆಪಿಯವರು ಅಪಮಾನ ಮಾಡಿದಂತೆ. ಅವರ ವಿಚಾರ ದೇವಸ್ಥಾನ, ಮುಸ್ಲಿಂ, ಪಾಕಿಸ್ತಾನ, ಅಮೆರಿಕಾ ಅಷ್ಟೆ. ಟ್ಯಾಕ್ಸ್ ಬಗ್ಗೆ ಟ್ರಂಪ್‌ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಪ್ರಶ್ನೆ ಮಾಡಲಿ. ಬಿಜೆಪಿಯವರನ್ನು ಚಾಮುಂಡೇಶ್ವರಿ ಸಹ ಒಪ್ಪಲ್ಲ. ಭಾರತ ಸರ್ವಧರ್ಮದ ನೆಲೆ. ಮತಕ್ಕಾಗಿ ಮಾತನಾಡುತ್ತೇವೆಂದು ಬಿಜೆಪಿ ಹೇಳಿಲಿ. ನಾವು ಸರ್ವ ಧರ್ಮಗಳ ಪರ ಇದ್ದೇವೆ. ಬಾನು ಮುಷ್ತಾಕ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.





