Mysore
21
overcast clouds
Light
Dark

ಪುಸ್ತಕ ಸಮಿತಿ, ಸ್ಮರಣ ಸಂಚಿಕೆ ಸಮಿತಿ ನಡುವೆ ಸಮನ್ವಯತೆ ಇರಲಿ-ಡಾ.ಮಹೇಶ ಜೋಶಿ

ಮಂಡ್ಯ: ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಟವಾಗುವ ಸ್ಮರಣ ಸಂಚಿಕೆ ಲೇಖನಗಳು ಮತ್ತು ಪುಸ್ತಕದ ವಿಷಯಗಳ ಹೊಂದಾಣಿಕೆ ದೃಷ್ಟಿಯಿಂದ ಪುಸ್ತಕ ಸಮಿತಿ ಮತ್ತು ಸ್ಮರಣ ಸಂಚಿಕೆ ಸಮಿತಿಗಳ ನಡುವೆ ಸಮನ್ವಯತೆ ಇರಲಿ ಎಂದು ಕನ್ನಡ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಕಚೇರಿ ಮಿನಿ ಸಭಾಂಗಣದಲ್ಲಿ ಪುಸ್ತಕ ಸಮಿತಿಯ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ಮತ್ತು ಸ್ಮರಣ ಸಂಚಿಕೆ ಸಮಿತಿಯ ಅಧ್ಯಕ್ಷ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಭಾಗವಹಿಸಿದ್ದ ಸಭೆಯಲ್ಲಿ ಸದಸ್ಯರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಾಹಿತ್ಯ ಸಮ್ಮೇಳನ ಪುಸ್ತಕ ಸಮಿತಿಯಿಂದ ರಚಿತವಾಗುವ ೩೮ ಪುಸ್ತಕಗಳು, ಸ್ಮರಣ ಸಂಚಿಕೆಯಲ್ಲಿ ಲೇಖನಗಳ ವಿಷಯಗಳು ಪುನರಾವರ್ತಿತವಾಗುವುದನ್ನು ತಪ್ಪಿಸಲು ಸಮನ್ವಯತೆ ಅಗತ್ಯ. ಪುಸ್ತಕ ಸಮಿತಿಗೆ ಬರುವ ಕಡಿಮೆ ಪುಟಗಳ ಲೇಖನಗಳು ಸೂಕ್ತವಾಗಿದ್ದರೆ ಸ್ಮರಣ ಸಂಚಿಕೆಗೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಸೂಚಿಸಿದರು.

ಜಿಲ್ಲೆಯ ಸಾಧಕರ ಬಗ್ಗೆ ಬರೆಯುವಾಗ ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿ ಬರೆಯಬೇಕು. ಸಮ್ಮೇಳನದ ಅತಿಥಿಗಳಿಗೆ ಪ್ರಕಟವಾಗುವ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡಲಾಗುವುದು. ಅಂತೆಯೇ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಪುಸ್ತಕಗಳನ್ನು ನೆನಪಿನ ಕಾಣಿಕೆಯಾಗಿ ನೀಡುವ ಸಂಪ್ರದಾಯ ರೂಢಿಸಿಕೊಳ್ಳಿ ಎಂದು ತಿಳಿಸಿದರು.

ಮಾಧ್ಯಮದವರಿಗೆ ಶ್ಲಾಘನೆ
ಸಮ್ಮೇಳನ ಸಮಿತಿಗಳ ಸಭೆಯ ಕಲಾಪಗಳ ವರದಿಗಳನ್ನು ವಿಸ್ತೃತವಾಗಿ ಪ್ರತಿನಿತ್ಯ ಪ್ರಕಟಿಸುತ್ತಿರುವ ಮಾಧ್ಯಮದವರನ್ನು ವಿಶೇಷವಾಗಿ ಶ್ಲಾಘಿಸಿದ ಜೋಶಿ ಮುಂದೆಯೂ ಇದೇ ರೀತಿ ಸಹಕಾರ ಮುಂದುವರಿಯಲಿ ಎಂದು ಆಶಿಸಿದರು. ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜು ಹಾಗೂ ಇನ್ನಿತರೆ ಸದಸ್ಯರು ಅಧ್ಯಕ್ಷರ ಮಾತಿಗೆ ದನಿಗೂಡಿಸಿದರು.

ಜಿಲ್ಲೆಯ ಕವಿಗಳ ಪ್ರಾತಿನಿಧಿಕ ಕವನ ಸಂಕಲನ ಹೊರತರಲು ಸಾಹಿತಿ ಕೊತ್ತತ್ತಿ ರಾಜು ಮತ್ತು ಕಥಾ ಸಂಕಲನವೊಂದರ ಪ್ರಕಟಣೆಗೆ ಯುವ ಲೇಖಕಿ ಎಂ.ಯು.ಶ್ವೇತ ನೀಡಿದ ಸಲಹೆಗೆ ಸಭೆ ಒಪ್ಪಿಗೆ ನೀಡಿತು.

ಅಕ್ಟೋಬರ್ ೩೦ ರ ನಂತರ ಪುಸ್ತಕಗಳ ಮುದ್ರಣ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕ ಎನ್.ಎಸ್. ಶ್ರೀಧರಮೂರ್ತಿ ತಿಳಿಸಿದರು.

ಲೇಖನಗಳಿಗೆ ಲೇಖಕರೇ ಹೊಣೆ- ಪದ್ಮಿನಿ ನಾಗರಾಜು

ಪುಸ್ತಕಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗುವ ಲೇಖನದಲ್ಲಿ ಯಾವುದೇ ವಿವಾದಿತ ಅಂಶ ಇರದಂತೆ ಸಂಪಾದಕ ಮಂಡಳಿ ಗಮನಿಸಬೇಕು. ಜೊತೆಗೆ ವಿಷಯಗಳಿಗೆ ಸಂಬಂಧಿಸಿದಂತೆ ಮುಂದೆ ಏನಾದರೂ ವಿವಾದ ಉಂಟಾದರೆ ಆಯಾ ಲೇಖಕರನ್ನು ಹೊಣೆಗಾರರನ್ನಾಗಿ ಮಾಡಬೇಕು. ಕವನ ಹಾಗೂ ಕತೆಗಳ ಪ್ರಕಟಣೆಗೆ ಲೇಖಕರ ಅನುಮತಿ ಪಡೆಯಬೇಕು. ಹಿಂದಿನ ಸಮ್ಮೇಳನದಲ್ಲಿ ಇಂತಹ ಸಮಸ್ಯೆ ಉದ್ಭವಿಸಿದೆ ಎಂದು ಕೇಂದ್ರ ಕಸಾಪ ಕಾರ್ಯದರ್ಶಿ ಪದ್ಮಿನಿ ನಾಗರಾಜು ತಿಳಿಸಿದರು.

ಆಕರ್ಷಕ ಶೀರ್ಷಿಕೆ: ಡಾ.ಮುದ್ದೇಗೌಡ
ಪುಸ್ತಕ ಸಮಿತಿ ವತಿಯಿಂದ ಪ್ರಕಟವಾಗುವ ಪುಸ್ತಕಗಳಿಗೆ ಆಕರ್ಷಕ ಶೀರ್ಷಿಕೆ ನೀಡಲಾಗುವುದು ಎಂದು ಪುಸ್ತಕ ಸಮಿತಿ ಅಧ್ಯಕ್ಷ ಮುದ್ದೇಗೌಡ ತಿಳಿಸಿದರು. ಈಗಾಗಲೇ ಪುಸ್ತಕ ಸಮಿತಿ ಮುಂದೆ ಬಂದಿರುವ ಪುಸ್ತಕಗಳ ವಿಷಯವನ್ನು ಸಭೆಯ ಗಮನಕ್ಕೆ ತಂದರು ಮಂಡ್ಯ ಮತ್ತು ನಾಲ್ವಡಿ ಕುರಿತ ಪುಸ್ತಕವೊಂದನ್ನು ಪ್ರಕಟಿಸಲಾಗುವುದು ಎಂದರು.

ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಕೃಷ್ಣೇಗೌಡ ಹುಸ್ಕೂರು, ಸಾಹಿತಿ ಕಲೀಂಉಲ್ಲಾ, ಚಲುವೇಗೌಡ, ಮಜ್ಜಿಗೆಪುರ ಶಿವರಾಂ,ಬಸಪ್ಪ ನೆಲಮಾಕನಹಳ್ಳಿ, ತಿಮ್ಮರಾಯಿಗೌಡ ಮಾತನಾಡಿದರು.

ಸಭೆಯಲ್ಲಿ ಸಮ್ಮೇಳನ ಮತ್ತು ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಕೇಂದ್ರ ಕಸಾಪ ಗೌ||ಕಾರ್ಯದರ್ಶಿ ನೇ.ಭ. ರಾಮಲಿಂಗ ಶೆಟ್ಟಿ,ಕೋಶಾಧ್ಯಕ್ಷ ಪಟೇಲ್ ಪಾಂಡು, ಗ್ರಂಥಾಲಯ ಅಧಿಕಾರಿಗಳಾದ ಕೃಷ್ಣಮೂರ್ತಿ,ನಂದೀಶ್,ಗೌ||ಕಾರ್ಯದರ್ಶಿ ಹರ್ಷ ವಿ ಪಣ್ಣೆದೊಡ್ಡಿ, ಕೋಶಾಧ್ಯಕ್ಷ ಬಿ.ಎಂ.ಅಪ್ಪಾಜಪ್ಪ, ತಾಲೂಕು ಅಧ್ಯಕ್ಷ ಚಂದ್ರಲಿಂಗು, ನಗರಾಧ್ಯಕ್ಷೆ ಸುಜಾತ ಕೃಷ್ಣ, ಪದಾಧಿಕಾರಿಗಳಾದ ಧನಂಜಯ ದರಸಗುಪ್ಪೆ, ಹೊಳಲು ಶ್ರೀಧರ್, ಮಂಜುನಾಥ್ ಬಲ್ಲೇನಹಳ್ಳಿ, ಸುಮಾರಾಣಿ ಶಂಭು,ಷೌಕತ್ ಆಲಿ, ಭವಾನಿ ಲೋಕೇಶ್ ಸೇರಿದಂತೆ ಹಲವು ಸದಸ್ಯರು ಹಾಜರಿದ್ದರು.