ಮಂಡ್ಯ: ರಾಜ್ಯ ಸರ್ಕಾರದ ನಿಜ ಬಣ್ಣವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಮಂಡ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಂದೆ ಭೀಕರ ಬರ ಪರಿಸ್ಥಿತಿ ಎದುರಾಗುತ್ತೆ. ಆದ್ದರಿಂದ ರಾಜ್ಯ ಬಜೆಟ್ ರೈತರ ಪರ ಇರಲಿ ಎಂದು ಆಗ್ರಹಿಸಿದರು.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ರೈತರ ಬೆಳೆಗೆ ಬೆಂಬಲ ಬೆಲೆ ಕೊಟ್ಟಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರು ಹೇಳಿಕೊಂಡು ಮತ್ತೊಂದು ಕಡೆ ಕಿತ್ತುಕೊಳ್ತಿದ್ದಾರೆ. ರಾಜ್ಯದಲ್ಲಿ ಬಡವರ ವಿರೋಧಿ ಸರ್ಕಾರ ಇದೆ. ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು, ಇದು ರೈತ ವಿರೋಧಿ ಹಾಗೂ ಭ್ರಷ್ಟ ಸರ್ಕಾರ ಎಂದು ಕಿಡಿಕಾರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ನಿಜ ಬಣ್ಣವನ್ನು ರಾಜ್ಯದ ಜನರ ಮುಂದೆ ಬಿಚ್ಚಿಡುತ್ತೇವೆ. SC/ST ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಚಲುವರಾಯಸ್ವಾಮಿ ಮಂತ್ರಿ ಇದ್ದಾರೆ. ಅವರಿಗೆ ತಾಕತ್ ಇದ್ರೆ ಇನ್ನು ಏನಾದರೂ ಈ ಭಾಗಕ್ಕೆ ತರಲಿ. ಉತ್ತರ ಕರ್ನಾಟಕಕ್ಕೆ ಕೊಟ್ಟ ವಿವಿಯನ್ನು ಕಿತ್ತು ಇಲ್ಲಿಗೆ ತರುವ ಅವಶ್ಯಕತೆ ಇಲ್ಲ. ಮತ್ತೊಂದು ವಿವಿ ಮಾಡಲಿ. ಈ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಕೃಷಿ ವಿವಿ ಜೊತೆಗೆ ತೋಟಗಾರಿಕೆ ವಿವಿ ತರುವ ಕುತಂತ್ರ ನಡೆಯುತ್ತಿದೆ ಎಂದು ಆರೋಪಿಸಿದರು.
ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಟ್ಟು, ಬೋಲ್ಟು ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಡಿಕೆಶಿ ಅವರಿಗೆ ವಿನಮ್ರವಾಗಿ ಹೇಳುತ್ತೇನೆ. ಅಧಿಕಾರ ಶಾಶ್ವತ ಅಲ್ಲ, ಯಾರು ನಿಮ್ಮ ಗುಲಾಮರಲ್ಲ. ಅಧಿಕಾರ ಶಾಶ್ವತ ಎನ್ನುವ ವರ್ತನೆ ಸರಿಯಲ್ಲ. ಭಂಡತನ ಬಿಟ್ಟು ತಪ್ಪಿಗೆ ಕ್ಷಮೆಯಾಚಿಸಿ ಎಂದು ಆಗ್ರಹಿಸಿದರು.



