ಮಂಡ್ಯ : ಸ್ವಾತಂತ್ತ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರ ದೊಡ್ಡದ್ದು, ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಗಂಗಾಧರ ರಾವ್ ದೇಶ ಪಾಂಡೆ, ನಿಜಲಿಂಗಪ್ಪ ಸೇರಿದಂತೆ ಹಲವರನ್ನು ನಾವು ಇಂದಿಗೂ ನೆನೆಸಿಕೊಳ್ಳಬೇಕಿದೆ ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ಹೇಳಿದರು.
ಶುಕ್ರವಾರ ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳು; ನಮ್ಮ ಸರ್ಕಾರದ ಮೂಲ ಧ್ಯೇಯ ಸಮಾನತೆ ಮತ್ತು ಸಾಮಾಜಿಕ ನ್ಯಾಯ. ಅದರಲ್ಲೂ ಜನಸಾಮಾನ್ಯರ ಮತ್ತು ಹಿಂದುಳಿದ ವರ್ಗದವರ ಅಗತ್ಯತೆಗಳನ್ನು ಪೂರೈಸುವ ಆಶಯವನ್ನು ನಮ್ಮ ಸರ್ಕಾರ ಹೊಂದಿದೆ. ಆರ್ಥಿಕ ಸಬಲೀಕರಣ, ಮಹಿಳಾ ಸಬಲೀಕರಣ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ನಮ್ಮ ಸರ್ಕಾರ ಅನೇಕ ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದ್ದು, ಅದರಲ್ಲಿ ಮಹತ್ವ್ವಾಕಾಂಕ್ಷಿ 5 ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎಂಬ ಹೆಗ್ಗಳಿಕೆ ನಮ್ಮ ಸರ್ಕಾರದ ಹೆಮ್ಮೆ ಎಂದು ತಿಳಿಸಿದರು.
ಶಕ್ತಿ ಯೋಜನೆ : ಈ ಯೋಜನೆಯಡಿ ಎಲ್ಲಾ ವರ್ಗದ ಮಹಿಳೆಯರ ಸಬಲೀಕರಣಕ್ಕಾಗಿ ನಮ್ಮ ಜಿಲ್ಲೆಯಲ್ಲಿ ಈವರೆಗೆ ಒಟ್ಟು 15.33 ಕೋಟಿ ಟಿಕೆಟ್‌ಗಳನ್ನು ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ನೀಡಿ ಒಟ್ಟು ರೂ.411 ಕೋಟಿ ವೆಚ್ಚ ಭರಿಸಲಾಗಿದೆ ಎಂದರು.
ಅನ್ನ ಭಾಗ್ಯ : ರಾಜ್ಯದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶದಿಂದ ನಮ್ಮ ಸರ್ಕಾರದ ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಜೂನ್ 2025ರ ಅಂತ್ಯಕ್ಕೆ ಒಟ್ಟು 73,50,911 ಫಲಾನುಭವಿಗಳಿಗೆ ರೂ 402 ಕೋಟಿ ಹಣವನ್ನು ಡಿಬಿಟಿ ಮೂಲಕ ಪಾವತಿಸಲಾಗಿದೆ ಎಂದು ಹೇಳಿದರು
ಗೃಹಜ್ಯೋತಿ: ಮಂಡ್ಯ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯಡಿ 492465 ಗ್ರಾಹಕರು ಹೆಸರು ನೋಂದಣಿ ಮಾಡಿಸಿಕೊಂಡಿದ್ದು, ಜೂನ್ 2025 ರ ಅಂತ್ಯಕ್ಕೆ ವಿದ್ಯುತ್‌ನ್ನು ಗ್ರಾಹಕರಿಗೆ ಉಚಿತವಾಗಿ ಒದಗಿಸಿ, ರೂ. 445 ಕೋಟಿಗಳನ್ನು ಪಾವತಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗೃಹಲಕ್ಷ್ಮಿ: ಯೋಜನೆಯಡಿ ಮಹಿಳೆಯರ ‘ಆರ್ಥಿಕ ಸಬಲೀಕರಣ’ಕ್ಕಾಗಿ ಪ್ರತಿ ತಿಂಗಳು ರೂ.2,000 (ಎರಡು ಸಾವಿರ ರೂ.) ನೀಡಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಇಲ್ಲಿಯವರೆಗೆ ರೂ.1762.41 ಕೋಟಿಗಳನ್ನು ಅರ್ಹ ಫಲಾನುಭವಿಗಳಿಗೆ ಪಾವತಿಸಿದೆ ಎಂದರು.
ಯುವನಿಧಿ: ಯುವನಿಧಿ ಯೋಜನೆ’ಯಡಿ ಮಂಡ್ಯ ಜಿಲ್ಲೆಯಲ್ಲಿ ಈವರೆಗೆ 5,942 ಅಭ್ಯರ್ಥಿಗಳಿಗೆ ರೂ.3.32 ಕೋಟಿ ನಿರುದ್ಯೋಗ ಭತ್ಯೆಯನ್ನು ಪಾವತಿಸಲಾಗಿದೆ ಎಂದು ತಿಳಿಸಿದರು.
*ನೀರಾವರಿ ಯೋಜನೆ*
ಕೃಷ್ಣರಾಜಸಾಗರ ಜಲಾಶಯದ ಯೋಜನೆಯಡಿ ವಿ.ಸಿ.ನಾಲೆ ಎರಡನೇ ಹಂತದ ಆಧುನೀಕರಣ ಪ್ಯಾಕೇಜ್-1 ಕಾಮಗಾರಿ, ಮದ್ದೂರು ತಾಲ್ಲೂಕಿನಲ್ಲಿ ಬರುವ ಕೆಮ್ಮಣ್ಣುನಾಲೆ ಆಧುನೀಕರಣ ಕಾಮಗಾರಿ, ಲೋಕಸರ ಶಾಖಾ ನಾಲೆಯ ಆಧುನೀಕರಣ ಕಾಮಗಾರಿ, ಹೆಬ್ಬಕವಾಡಿ ಶಾಖಾ ನಾಲೆ ಕಾಮಗಾರಿ, ನಿಡಘಟ್ಟ ಶಾಖಾ ನಾಲೆ ಆಧುನೀಕರಣ ಕಾಮಗಾರಿ ಹಾಗೂ ಸಂಪರ್ಕ ನಾಲೆ ಅಭಿವೃದ್ಧಿ ಕಾಮಗಾರಿಗಳನ್ನು ಒಟ್ಟು ರೂ. 667.00 ಕೋಟಿಗಳ ಅಂದಾಜಿನಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಕೃಷ್ಣರಾಜಸಾಗರ ಯೋಜನೆಯಡಿಯಲ್ಲಿ ಬರುವ ಆಣೆಕಟ್ಟುಗಳು, ನಾಲೆಗಳು, ಪಿಕಪ್‌ಗಳು, ಅಚ್ಚುಕಟ್ಟು ರಸ್ತೆ, ರಸ್ತೆ ತಡೆಗೋಡೆ, ಕೆರೆ-ಕಟ್ಟೆ ಹಾಗೂ ಇತರೆ ಅಭಿವೃದ್ಧಿ ಮತ್ತು ದುರಸ್ಥಿ ಕಾಮಗಾರಿಗಳನ್ನು ರೂ.204.00 ಕೋಟಿಗಳ ಅಂದಾಜಿನಲ್ಲಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಪ್ರಸಕ್ತ ಮುಂಗಾರು ಬೆಳೆಗಾಗಿ ಈಗಾಗಲೇ ನೀರಾವರಿ ಸಲಹಾ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಂಡAತೆ ರೈತರಿಗೆ ಅನುಕೂಲವಾಗುವಂತೆ ಮುಂಗಾರು ಬೆಳೆಗಳಿಗೆ ನೀರನ್ನು ಹರಿಸಲು ಕ್ರಮವಹಿಸಲಾಗುತ್ತದೆ ಎಂದು ಹೇಳಿದರು.
*ಕೃಷಿ*
ರಸಗೊಬ್ಬರ ಲಭ್ಯತೆಯ ಬಗ್ಗೆ ಗೊಂದಲಗಳನ್ನು ಅನಗತ್ಯವಾಗಿ ಸೃಷ್ಟಿಸಲಾಗುತ್ತಿದೆ. ಆದರೆ, ರಸಗೊಬ್ಬರದ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಕ್ರಮವಹಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯಲ್ಲಿ ಮುಂಗಾರಿಗೆ ಒಟ್ಟು 28607 ಮೆಟ್ರಿಕ್ ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಲಭ್ಯವಿರುತ್ತದೆ. ಇದರಲ್ಲಿ ಯೂರಿಯಾ ಒಟ್ಟು 4421 ಮೆಟ್ರಿಕ್ ಟನ್ ಲಭ್ಯವಿರುತ್ತದೆ. ಆದ್ದರಿಂದ ರೈತರಿಗೆ ಯಾವುದೇ ತೊಂದರೆಯಾಗದAತೆ ರಸಗೊಬ್ಬರ ಪೂರೈಸಲು ಕ್ರಮವಹಿಸಲಾಗುತ್ತದೆ ಎಂದರು.
ಜಿಲ್ಲೆಯ 5 ಸಕ್ಕರೆ ಕಾರ್ಖಾನೆಗಳಲ್ಲಿ ಕಬ್ಬು ಅರೆಯುವ ಕಾರ್ಯ ಪ್ರಾರಂಭಿಸಲಾಗಿದೆ. ಇದುವರೆಗೂ ಜಿಲ್ಲೆಯ ಎಲ್ಲಾ ಸಕ್ಕರೆ ಕಾರ್ಖಾನೆಗಳಲ್ಲಿ 5,13,921 ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಮೈ-ಶುಗರ್ ಸಕ್ಕರೆ ಕಾರ್ಖಾನೆಯನ್ನು ಯಶಸ್ವಿಯಾಗಿ ಮುನ್ನಡೆಸುವ ದೃಷ್ಟಿಯಿಂದ ನಮ್ಮ ಸರ್ಕಾರದಿಂದ ರೂ.10.00 ಕೋಟಿ ಆರ್ಥಿಕ ನೆರವು ನೀಡಲಾಗಿದೆ. ಅಲ್ಲದೇ, ಸಂಬAಧಿಸಿದAತೆ, 2023-24 ನೇ ಸಾಲಿನರವರೆಗೆ ಹಲವು ವರ್ಷಗಳಿಂದ ಬಾಕಿ ಇದ್ದ ರೂ.53 ಕೋಟಿ ವಿದ್ಯುತ್ ಬಿಲ್ಲನ್ನು ನಮ್ಮ ಸರ್ಕಾರ ಮನ್ನಾ ಮಾಡಿದೆ ಮತ್ತು 2023-24 ನೇ ಸಾಲಿನಲ್ಲಿ ಮೈ-ಶುಗರ್ ಸಕ್ಕರೆ ಕಾರ್ಖಾನೆ ಪ್ರಪ್ರಥಮ ಬಾರಿಗೆ 1.51 ಕೋಟಿ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಿದ್ದು, 71 ಲಕ್ಷ ಯುನಿಟ್ ವಿದ್ಯುತ್ ಅನ್ನು ಮಾರಾಟ ಮಾಡುವ ಮೂಲಕ ರೂ 4.5 ಕೋಟಿ ಉಳಿತಾಯ ಮಾಡಿರುತ್ತದೆ ಹಾಗೂ ಹಲವು ವರ್ಷಗಳಿಂದ ಕಾರ್ಮಿಕರಿಗೆ ನೀಡಬೇಕಾಗಿದ್ದ ಬಾಕಿ ವೇತನವನ್ನು ಪರಿಷ್ಕರಿಸಿ, ರೂ.4.0 ಕೋಟಿಗಳ ವೇತನವನ್ನು ಪಾವತಿಸಲಾಗಿದೆ ಎಂದು ಹೇಳಿದರು.
ಒಂದೇ ಸೂರಿನಡಿ ಕೃಷಿ ಹಾಗೂ ಕೃಷಿ ಸಂಬಂಧಿತ ಯೋಜನೆಗಳು ಹಾಗೂ ತಾಂತ್ರಿಕತೆಗಳ ಮಾಹಿತಿ ಒಳಗೊಂಡ ಸುಸಜ್ಜಿತ ರೈತ ಸಂಪರ್ಕ ಕೇಂದ್ರ ಕಟ್ಟಡ ನಿರ್ಮಾಣ ಮಾಡಲು ಪ್ರತಿ ಕೇಂದ್ರಕ್ಕೆ ರೂ 2 ಕೋಟಿಯಂತೆ ಒಟ್ಟು 8 ರೈತ ಸಂಪರ್ಕ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕಾಗಿ ಒಟ್ಟು ರೂ.16 ಕೋಟಿ ಮಂಜೂರು ಮಾಡಲಾಗಿರುತ್ತದೆ ಎಂದು ತಿಳಿಸಿದರು.
ಸಣ್ಣ ಉದ್ದಿಮೆದಾರರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸಹಾಯಧನದ ಅಡಿಯಲ್ಲಿ ಪಿ ಎಮ್ ಎಫ್ ಎಂ ಈ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆವಿಗೂ 262 ರೈತ ಉದ್ದಿಮೆದಾರರಿಗೆ ಸಹಾಯಧನ ನೀಡಲಾಗಿದ್ದು, ಮಂಡ್ಯ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಆತಗೂರು ಏತ ನೀರಾವರಿ ಯೋಜನೆಯಲ್ಲಿ ಮೊದಲನೇ ಹಂತದಲ್ಲಿ ‘ಮದ್ದೂರು ತಾಲ್ಲೂಕಿನ 15 ಕೆರೆಗಳಿಗೆ ಹಾಗೂ 2ನೇ ಹಂತದಲ್ಲಿ 2 ಕೆರೆಗಳಿಗೆ ನೀರು ತುಂಬಿಸಲು ಹಾಗೂ ವಿವಿಧ ಕಡೆಗಳಲ್ಲಿ ರಕ್ಷಣಾತ್ಮಕ ತಡೆಗೋಡೆ ಮತ್ತು ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ರೂ 80.12 ಕೋಟಿಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಂಡು ಪೂರ್ಣಗೊಳಿಸಲಾಗಿರುತ್ತದೆ ಎಂದರು
ಮದ್ದೂರು ತಾಲ್ಲೂಕಿನ ಲೋಕಸರ ಶಾಖಾ ನಾಲೆ ಹಾಗೂ ವಿವಿಧ ಕಡೆಗಳಲ್ಲಿ ಆರ್.ಸಿ.ಸಿ. ಟಫ್ ಮತ್ತು ಅಡ್ಡ ಮೋರಿ ನಿರ್ಮಾಣ, ರಸ್ತೆ ಅಭಿವೃದ್ಧಿ ಮತ್ತು ನಾಲಾ ಅಭಿವೃದ್ಧಿ ಅಕ್ಕಡಕ್ಟ್ ಅಭಿವೃದ್ಧಿ ಹಾಗೂ ನಾಲಾ ವಿತರಣಾ ಆಧುನೀಕರಣ ಕಾಮಗಾರಿಗಳನ್ನು ರೂ 396.34 ಕೋಟಿಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ ಎಂದು ಹೇಳಿದರು.
*ಕನ್ನಡ ಸಾಹಿತ್ಯ ಸಮ್ಮೇಳನ*
87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸವಿ ನೆನಪಿಗಾಗಿ ಕನ್ನಡ ಭವನವೊಂದನ್ನು ನಿರ್ಮಿಸಬೇಕು ಎಂಬ ಅಭಿಲಾಷೆಯನ್ನು ಜನಪ್ರತಿನಿಧಿಗಳು, ಸಾಹಿತ್ಯಾಸಕ್ತರು ಹಾಗೂ ಮಂಡ್ಯದ ಜನತೆ ವ್ಯಕ್ತ ಪಡಿಸಿದ್ದು, ಈ ಹಿನ್ನೆಲೆಯಲ್ಲಿ ರೂ.5.0 ಕೋಟಿ ವೆಚ್ಚದಲ್ಲಿ ಕನ್ನಡ ಭವನವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿರುತ್ತದೆ. ಸಮ್ಮೇಳನದ ಸವಿನೆನಪಿಗಾಗಿ ಹೊರತರುತ್ತಿರುವ ಈ ಸ್ಮರಣ ಸಂಚಿಕೆಯು ನಾಡಿನ ಹಲವು ಲೇಖಕರ ಹಾಗೂ ಮಂಡ್ಯ ಜಿಲ್ಲೆಯ ಸಾಹಿತ್ಯಾಸಕ್ತರು ಸಿದ್ದಪಡಿಸಿರುವ “ಬೆಲ್ಲದಾರತಿ” ಸ್ಮರಣ ಸಂಚಿಕೆಯನ್ನು ದಿನಾಂಕ.24-08-2025 ರಂದು ವಿದ್ಯುಕ್ತವಾಗಿ ಬಿಡುಗಡೆಗೊಳಿಸಲು ಯೋಜಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯಡಿ ಪ್ರತೀ ವಿಧಾನ ಸಭಾ ಕ್ಷೇತ್ರದ ಶಾಸಕರುಗಳಿಗೆ ರೂ.50.00 ಕೋಟಿ ನೀಡಲು ಮಾನ್ಯ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ತೀರ್ಮಾನಿಸಿದ್ದು, ಇದರಂತೆ, ವಿವಿಧ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ ಎಂದು ಹೇಳಿದರು.
*ಕಂದಾಯ ಇಲಾಖೆ*
ನಮ್ಮ ಜಿಲ್ಲೆಯಲ್ಲಿ ರೈತರ ಪಹಣಿಗಳನ್ನು ಆಧಾರ್ ಜೋಡಣೆ ಮಾಡುವ ಸಂಬಂಧ ಈಗಾಗಲೇ, 23 ಲಕ್ಷ ಪಹಣಿಗಳ ಪೈಕಿ ಸುಮಾರು 18 ಲಕ್ಷ ಪಹಣಿಗಳಿಗೆ ಆಧಾರ್ ಜೋಡಣೆ ಮಾಡಲಾಗಿರುತ್ತದೆ. ಹಾಗೂ 116 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿ ಅಧಿಸೂಚನೆ ಹೊರಡಿಸಿದ್ದು, ಈಗಾಗಲೇ 3484 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ವಿತರಿಸಲಾಗಿದೆ ಎಂದು ಹೇಳಿದರು.
ಕಂದಾಯ ದಾಖಲೆಗಳನ್ನು ಸಂರಕ್ಷಿಸುವ ದೃಷ್ಟಿಯಿಂದ ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳ ಗಣಕೀಕರಣವನ್ನು ಜಾರಿಗೊಳಿಸಿದ್ದು, ಈಗಾಗಲೇ ಜಿಲ್ಲೆಯಾದ್ಯಂತ ಒಟ್ಟು 1.20 ಕೋಟಿ ಪುಟಗಳನ್ನು ತಂತ್ರಾಂಶದಲ್ಲಿ ಸ್ಕಾನ್ ಮಾಡಿ ಅಪ್‌ಲೋಡ್ ಮಾಡಿ ಗಣಕೀಕರಣ ದಾಖಲೆಗಳನ್ನು ನೀಡಲಾಗುತ್ತಿದೆ ಎಂದರು
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬಾಕಿ ಇದ್ದ ಕಂದಾಯ ನ್ಯಾಯಾಲಯದಲ್ಲಿನ ವಿವಿಧ ಪ್ರಕರಣಗಳನ್ನು ಇತ್ಯರ್ಥಪಡಿಸಲು ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಂಡಿದ್ದು, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಒಟ್ಟು 17,500 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿರುತ್ತದೆ ಎಂದು ತಿಳಿಸಿದರು
ಹಲವು ವರ್ಷಗಳಿಂದ ಸರ್ಕಾರಿ ಭೂಮಿ ಮಂಜೂರಾತಿಯಾಗಿ, ಪೋಡಿಯಾಗಲು ಬಾಕಿ ಇರುವ ಪ್ರಕರಣಗಳನ್ನು ದುರಸ್ತಿ ಮಾಡಲು ದರಖಾಸ್ತು ಪೋಡಿ ಆಂದೋಲನವನ್ನು ಕೈಗೊಳ್ಳಲಾಗಿದ್ದು, ಕಳೆದ 5 ತಿಂಗಳಿನಿಂದ ಇಲ್ಲಿಯವರೆಗೆ 1500 ಕಂದಾಯ ನ್ಯಾಯಾಲಯ ಪ್ರಕರಣಗಳನ್ನು ಸ್ವಯಂ ಪ್ರೇರಿತವಾಗಿ ದರಖಾಸ್ತು ಪೋಡಿ ಮಾಡಿಕೊಡಲಾಗಿದೆ. ಹಾಗೂ ಗ್ರಾಮ ಆಡಳಿತ ಅಧಿಕಾರಿಗಳಿಗೆ ಒಟ್ಟು-354 ಲ್ಯಾಪ್‌ಟಾಪ್‌ಗಳನ್ನು ವಿತರಿಸಲಾಗಿದ್ದು, ಇ-ಆಫೀಸ್ ಮೂಲಕವೇ ಕಾರ್ಯನಿರ್ವಹಿಸಲು ಸೂಚಿಸಲಾಗಿರುತ್ತದೆ ಎಂದರು.
ಜಿಲ್ಲೆಯಲ್ಲಿ ಖಾಲಿ ಇರುವ ಗ್ರಾಮ ಆಡಳಿತಾಧಿಕಾರಿಗಳ ಹುದ್ದೆಯನ್ನು ಭರ್ತಿಮಾಡುವ ಉದ್ದೇಶದಿಂದ ಪಾರದರ್ಶಕವಾಗಿ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ನಮ್ಮ ಜಿಲ್ಲೆಯಲ್ಲಿ 68 ಗ್ರಾಮ ಆಡಳಿತ ಅಧಿಕಾರಿಗಳನ್ನು ನೇಮಕಾತಿ ಮಾಡಲಾಗಿದೆ ಎಂದು ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ತಾಲ್ಲೂಕು ಕಛೇರಿಗೆ ರೂ.16.00 ಕೋಟಿ ಮೊತ್ತದಲ್ಲಿ ನೂತನವಾಗಿ ಪ್ರಜಾಸೌಧ ನಿರ್ಮಿಸಲು ನಮ್ಮ ಸರ್ಕಾರದಿಂದ ಈಗಾಗಲೇ ಅನುಮೋದನೆ ನೀಡಲಾಗಿದ್ದು, ಶೀಘ್ರವೇ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದರು.
*ಶಿಕ್ಷಣ*
ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಕಳೆದ ಸಾಲಿನಲ್ಲಿ ರಾಜ್ಯದಲ್ಲಿ 19 ನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆಯು ಈ ಬಾರಿ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ಎಲ್ಲಾ ಅಧಿಕಾರಿಗಳ ಪರಿಶ್ರಮದಿಂದಾಗಿ 12ನೇ ಸ್ಥಾನ ಗಳಿಸಲಾಗಿರುತ್ತದೆ ಎಂದರು.
*ನರೇಗಾ ಯೋಜನೆ*
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿಯಲ್ಲಿ 2025-26 ನೇ ಸಾಲಿನಲ್ಲಿ ಒಟ್ಟು 9.28 ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.113 ರಷ್ಟು ಪ್ರಗತಿ ಸಾಧಿಸಲಾಗಿದೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ 1545 ಕೋಟಿ ವೆಚ್ಚದಲ್ಲಿ ಶುದ್ಧ ಮತ್ತು ಸುರಕ್ಷಿತ ನೀರನ್ನು ನೀಡಲು ಕಾಮಗಾರಿಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ನದಿ ಮೂಲಗಳಿಂದ ನೀರು ಸರಬರಾಜು ಮಾಡಲು 6 ಬೃಹತ್ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ರೂ.1628 ಕೋಟಿಗಳ ವೆಚ್ಚದಲ್ಲಿ ಅನುಷ್ಟಾನಗೊಳಿಸಲು ಯೋಜಿಸಲಾಗುತ್ತಿದೆ ಎಂದರು.
ಜಿಲ್ಲೆಯಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 6000 ಹೆಣ್ಣು ಮಕ್ಕಳಿಗೆ ಸಿ.ಆರ್.ಎಸ್ ಅನುದಾನದಡಿಯಲ್ಲಿ ಮುಟ್ಟಿನ ಕಪ್‌ಗಳನ್ನು ವಿತರಿಸಲಾಗುತ್ತಿದೆ ಎಂದರು
ಸಂಜೀವಿನಿ ಯೋಜನೆಯಡಿ ಸ್ವ-ಸಹಾಯ ಗುಂಪಿನ ಆಹಾರ ಉತ್ಪನ್ನಗಳಿಗೆ ಅಕ್ಕಾ ಬ್ರಾಂಡಿಂಗ್ ಮತ್ತು ಆಹಾರೇತರ ಉತ್ಪನ್ನಗಳಿಗೆ ಅಸ್ಮಿತೆ ಬ್ರಾಂಡಿಂಗ್ ಮಾಡುವ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕುಕ್ಕಟ ಸಂಜೀವಿನಿ ಯೋಜನೆಯಡಿ ಪ್ರತಿ ತಾಲ್ಲೂಕಿಗೆ 5 ರಂತೆ ಕೋಳಿ ಸಾಕಾಣಿಕೆ ಕೇಂದ್ರಗಳನ್ನು ಸ್ವ-ಸಹಾಯ ಸಂಘಗಳ ಮೂಲಕ ತೆರೆಯಲು ಕ್ರಮವಹಿಸಲಾಗಿದೆ ಎಂದರು
ಕೃಷಿ ಪ್ರಧಾನವಾದ ಮೈಸೂರು ಪ್ರಾಂತ್ಯದ ಪ್ರಮುಖ ಬೇಡಿಕೆಯಂತೆ, ಅನೇಕ ಕೃಷಿ ಸಂಶೋಧನೆಯ ಅನಿವಾರ್ಯತೆಯನ್ನು ಮನಗಂಡ ಸರ್ಕಾರ, ಮಂಡ್ಯ, ಮೈಸೂರು, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳಿಗೆ ಅನುಕೂಲವಾಗುವಂತೆ ಮಂಡ್ಯ ಜಿಲ್ಲೆಯಲ್ಲಿ “ಕೃಷಿ ವಿಶ್ವವಿದ್ಯಾನಿಲಯ”ವನ್ನು ಸ್ಥಾಪಿಸಲು ಮಂಜೂರಾತಿ ನೀಡಿ, ರೂ.25.00 ಕೋಟಿ ಅನುದಾನವನ್ನು ಅಭಿವೃದ್ಧಿಗಾಗಿ ನೀಡಿದೆ. ಅಲ್ಲದೇ ನಮ್ಮ ಸರ್ಕಾರ ಘೋಷಿಸಿದಂತೆ, ವಿಶ್ವ ವಿದ್ಯಾನಿಲಯದ ಆಡಳಿತ ಕಟ್ಟಡ ನಿರ್ಮಾಣಕ್ಕೆ ಆರ್ ಐ ಡಿ ಎಫ್ ಯೋಜನೆಯಡಿಯಲ್ಲಿ ರೂ.70.70 ಕೋಟಿ ಅನುದಾನ ಮಂಜೂರಾತಿ ನೀಡಲಾಗಿದೆ ಎಂದರು.
ನಾಗಮಂಗಲ ತಾಲ್ಲೂಕಿನ ಬೀರೇಶ್ವರ ಗ್ರಾಮದಲ್ಲಿ 37.75 ಕೋಟಿ ವೆಚ್ಚದಲ್ಲಿ ಕಾರ್ಮಿಕ ಇಲಾಖೆ ವತಿಯಿಂದ ನೂತನ ಶ್ರಮಿಕ ಶಾಲೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದ್ದು ಕಾರ್ಮಿಕ ಮಕ್ಕಳಿಗೆ ಗುಣಮಟ್ಟದ ವಸತಿಯುತ ಶಿಕ್ಷಣ ಲಭ್ಯವಾಗಲಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಭೀಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿಯಲ್ಲಿ ನೋಂದಣಿ ಅಭಿಯಾನವನ್ನು ಯಶಸ್ವಿಯಾಗಿ ಮಾಡಿದ್ದು, ರಾಜ್ಯದಲ್ಲಿಯೇ ಅತಿ ಹೆಚ್ಚು ನೋಂದಣಿ ಮಾಡುವ ಮೂಲಕ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ ಗಳಿಸಿರುವುದಕ್ಕೆ ಸಂತೋಷವಾಗಿದೆ. ಇದಕ್ಕೆ ಕಾರಣರಾದ ಸಮಿತಿಯ ಸದಸ್ಯರು ಹಾಗೂ ಎಲ್ಲಾ ಅಧಿಕಾರಿ ವರ್ಗದವರಿಗೆ ಅಭಿನಂದನೆ ಸಲ್ಲಿಸಿದರು.
ನಮ್ಮ ಸರ್ಕಾರ ನೀರಾವರಿ ಹಾಗೂ ಕೃಷಿ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ಇತ್ತೀಚಿಗೆ ರೂ.560 ಕೋಟಿ ವೆಚ್ಚದಲ್ಲಿ ನಾಗಮಂಗಲ ಶಾಖಾ ನಾಲೆ ಮರುವಿನ್ಯಾಸ ಕಾಮಗಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದರು.
ಮಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಯಲ್ಲಿ ಬರುವ ಆರೈಕೆದಾರರು ತಂಗುವುದಕ್ಕಾಗಿ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ರೂ. 30.00 ಲಕ್ಷಗಳಲ್ಲಿ ಆರೋಗ್ಯಧಾಮವನ್ನು ನಿರ್ಮಿಸಲಾಗಿದೆ. ಮತ್ತು ರೂ.40.00 ಲಕ್ಷಗಳ ವೆಚ್ಚದಲ್ಲಿ ಹೈ-ಟೆಕ್ ಶೌಚಾಲಯವನ್ನು ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಇದರ ಸದುಪಯೋಗವಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್, ವಿಧಾನ ಪರಿಷತ್ ಶಾಸಕ ದಿನೇಶ್ ಗೂಳಿಗೌಡ, ಮುಡಾ ಅಧ್ಯಕ್ಷ ನಯೀಮ್, ನಗರಸಭೆ ಅಧ್ಯಕ್ಷ ಪ್ರಕಾಶ್, ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ: ಹೆಚ್ ಕೃಷ್ಣ, ಜಿಲ್ಲಾಧಿಕಾರಿ ಡಾ ಕುಮಾರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ ಆರ್ ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ವಿಶ್ವನಾಥ್, ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.





