ಮಂಡ್ಯ: ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಹಾಗೂ ಶಾಸಕರು ವಿ.ಸಿ.ನಾಲೆ ಆಧುನೀಕರಣ ಕಾಮಗಾರಿಯ ವೀಕ್ಷಿಸಿದರು.
ಕೆ.ಆರ್.ಎಸ್‌ನಲ್ಲಿ ನಡೆದ ಕಾಮಗಾರಿ ಪರೀಶಿಲನೆ ಸಭೆ ಬಳಿಕ ನೀರಾವರಿ ಇಲಾಖೆ ಅಧಿಕಾರಿಗಳ ಜೊತೆ ಕೆಆರ್.ಎಸ್ ನಾರ್ಥ್ ಬ್ಯಾಂಕಿನಿಂದ ಹುಲಿಕೆರೆ ಸುರಂಗದಲ್ಲಿ ನಡೆಯುತ್ತಿರುವ ಕಾಮಗಾರಿವರೆಗೆ ಸಚಿವರು ಹಾಗೂ ಶಾಸಕರು ಕಾಮಗಾರಿ ವೀಕ್ಷಿಸಿದರು.
ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎನ್.ಚಲುವರಾಯಸ್ವಾಮಿ, ನಿಗಧಿತ ಅವಧಿಯೊಳಗೆ ನಾಲೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಳಿಸಲು ಸೂಚಿಸಿದ್ದೇನೆ. ಕಳಪೆ ಕಾಮಗಾರಿ ಕಂಡು ಬಂದರೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ತಿಳಿಸಿದರು.
ಆಧುನೀಕರಣ ಕಾಮಗಾರಿಯಿಂದ ವಿವಿಧ ತಾಲ್ಲೂಕುಗಳ ಕೊನೆಯ ಭಾಗಕ್ಕೂ ನೀರನ್ನು ಸುಲಭವಾಗಿ ತಲುಪಿಸಬಹುದು ಹಾಗೂ ಇದು ಶಾಶ್ವತ ಪರಿಹಾರವಾಗಿರುತ್ತದೆ. ಈ ನಾಲಾ ಭಾಗದಲ್ಲಿ ಬರುವ 18 ಕೆರೆಗಳಿಗೆ ನೀರು ತುಂಬಿಸಬಹುದು ಎಂದು ಸಚಿವರು ತಿಳಿಸಿದರು.
ಕೆ.ಆರ್.ಎಸ್ ನಿಂದ ನೀರು ಬಿಡುಗಡೆ ಮಾಡಲು ಹಾಗೂ ರೈತರಿಗೆ ಯಾವುದೇ ತೊಂದರೆಯಾಗದಂತೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲಾಗುವುದು. ರೈತರ ಅವಶ್ಯಕತೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಸ್ಥಳೀಯ ರೈತರ ಅಭಿಪ್ರಾಯ ಆಲಿಸಿದ ಸಚಿವರು ಕೃಷಿಕರ ಹಿತಕ್ಕಾಗಿ ಹೆಚ್ಚಿನ ಅನುದಾನ ತಂದು ಕಾಮಗಾರಿ ನಡೆಸಲಾಗುತ್ತಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿ ತಮ್ಮ ಆಶಯವಾಗಿದ್ದು ಅದಕ್ಕೆ ಜನರ ಸಹಕಾರವೂ ಅಗತ್ಯವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು.
ಪರಿಶೀಲನೆಯ ವೇಳೆ ವಿಧಾನಸಭಾ ಶಾಸಕರಾದ ರಾಮೇಶ್ ಬಾಬು ಬಂಡಿಸಿದ್ದೇಗೌಡ, ದರ್ಶನ್ ಪುಟ್ಟಣಯ್ಯ, ಪಿ.ರವಿ ಕುಮಾರ್, ವಿಧಾನ ಪರಿಷತ್ ಶಾಸಕ ಮಧು ಮಾದೇಗೌಡ, ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ: ಕುಮಾರ, ಕಾ.ನೀ.ನಿ.ನಿ ಅಧೀಕ್ಷಕ ಇಂಜಿನಿಯರ್ ರಘುರಾಂ, ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.