ಮಂಡ್ಯ: ರಾಜ್ಯ ಸರ್ಕಾರವು ಬಸ್ ಪ್ರಯಾಣ ದರ ಶೇ.15ರಷ್ಟು ಹೆಚ್ಚಿಸುವ ನಿರ್ಧಾರ ಕೈಗೊಂಡಿದೆ. ದರ ಏರಿಕೆ ನಿರ್ಧಾರವು ಜ.5 ರಂದು ಜಾರಿಗೆ ಬರಲಿದ್ದು, ಕೃಷಿ ಸಚಿವ ಚೆಲುವರಾಯಸ್ವಾಮಿ ಸರ್ಕಾರದ ಈ ನಿರ್ಧಾವನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ದರ ಏರಿಕೆ ಸಾರಿಗೆ ನಿಗಮಗಳ ಆರ್ಥಿಕ ಸ್ಥಿರತೆಗೆ ಆಗತ್ಯವಾಗಿದೆ ಎಂದು ಹೇಳಿದರು.
ಮುಂದುವರಿದು ಮಾತನಾಡುತ್ತಾ, ಬಸ್ ದರ ಹೆಚ್ಚಳ ಮಾಡಿ 10 ವರ್ಷ ಆಗಿದೆ. ಮಟನ್, ಬೇಳೆ, ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುತ್ತಲೆ ಇದೆ ಇದರ ಬಗ್ಗೆ ಮಾತನಾಡದ ಬಿಜೆಪಿ ಪಕ್ಷ ಈಗ ಪ್ರತಿಭಟನೆ ಮಾಡುತ್ತಿದೆ.
ಆಂಧ್ರ ಮತ್ತು ತಮಿಳುನಾಡಿನಲ್ಲಿ ಬಸ್ ಪ್ರಯಾಣ ದರ ನಮ್ಮ ರಾಜ್ಯಕ್ಕಿಂತ ಹೆಚ್ಚಿದೆ. 10 ವರ್ಷದಿಂದ ರಾಜ್ಯದಲ್ಲಿ ಬಸ್ ಪ್ರಯಾಣ ದರ ಪರಿಷ್ಕರಣೆ ಆಗಿಲ್ಲ. ದರ ಹೆಚ್ಚಳಕ್ಕೂ ಗ್ಯಾರಂಟಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಇನ್ನು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಟಾಂಗ್ ಕೊಟ್ಟ ಸಚಿವ ಚೆಲುವರಾಯಸ್ವಾಮಿ, ಎಚ್‌ಡಿಕೆ ಹೇಳಿ ನಾವು ಸರ್ಕಾರ ನಡೆಸಲು ಆಗುತ್ತಾ? ನಮ್ಮದು ಪ್ರಜಾಸತ್ತಾತ್ಮಕ ಸರ್ಕಾರ ಜನರು ನಮ್ಮ ಸರ್ಕಾರದ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದರು.





