ಮಳವಳ್ಳಿ : ಪಟ್ಟಣದ ಗ್ರಾಮ ದೇವತೆಗಳಾದ ಶ್ರೀ ಪಟ್ಟಲದಮ್ಮ-ದಂಡಿನ ಮಾರಮ್ಮ ಶಕ್ತಿ ದೇವತೆಗಳ ಸಿಡಿ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಜ.27ರಿಂದ ಆರಂಭವಾದ ಜಾತ್ರಾ ಮಹೋತ್ಸವದಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಸಿಡಿ ಉತ್ಸವ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ನಡೆದು, ಪಟ್ಟಲದಮ್ಮ ದೇವಸ್ಥಾನದ ಆವರಣಕ್ಕೆ ಆಗಮಿಸಿ, ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದ ನಂತರ ಅಗ್ನಿ ಕೊಂಡವನ್ನು ಅರ್ಚಕರು ಮತ್ತು ಹರಕೆ ಹೊತ್ತ ಭಕ್ತರು ಕೊಂಡ ಹಾಯುವ ಮೂಲಕ ಐತಿಹಾಸಿಕ ಸಿಡಿ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿತು.
ಸಿಡಿ ರಣಕ್ಕೆ ವಿಶೇಷ ಪೂಜೆ
ಸಿಡಿ ಜಾತ್ರಾ ಮಹೋತ್ಸವ ಶುಕ್ರವಾರ ರಾತ್ರಿಯಿಡೀ ಸಂಪ್ರದಾಯಬದ್ಧ ಆಚರಣೆಯಂತೆ ನಡೆಯಿತು. ಪ್ರತಿಯೊಂದು ಸಮಾಜದವರು ಘಟ್ಟಗಳನ್ನು ತಂದು ಶಕ್ತಿ ದೇವತೆಗೆ ಪೂಜೆ ಸಲ್ಲಿಸಿದರು. ಅನಂತರಾಂ ವೃತ್ತದ ಬಳಿ ಎಲ್ಲ ಘಟ್ಟಗಳು ಆಗಮಿಸಿದವು. ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿಶೇಷ ವಿದ್ಯುತ್ ದೀಪಾಲಂಕಾರಕ್ಕೆ ಚಾಲನೆ ನೀಡುವುದರೊಂದಿಗೆ ರಾತ್ರಿಯಿಡೀ ಜನರೊಡಗೂಡಿ ಹಬ್ಬದ ಸಂಭ್ರಮದಲ್ಲಿ ಭಾಗಿಯಾದರು.
ಶಾಸಕರ ಜೊತೆಯಲ್ಲಿ ಐಜಿಪಿ ನಂಜುಂಡಸ್ವಾಮಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿ.ಜೆ.ಶೋಭಾರಾಣಿ, ತಹಸಿಲ್ದಾರ್, ಉಪವಿಭಾಗಾಧಿಕಾರಿ ಘಟ್ಟಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಕೋಟೆ ಬೀದಿಯಲ್ಲಿ ಶುಕ್ರವಾರ ಮಧ್ಯರಾತ್ರಿ 1.45ರ ಸಮಯದಲ್ಲಿ ಸಿಡಿ ರಣವು ಅಲಂಕೃತಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಸುಲ್ತಾನ್ ರಸ್ತೆಯ ಮೂಲಕ ಶನಿವಾರ ಬೆಳಿಗ್ಗೆ 9 ಗಂಟೆಗೆ ದೇವಸ್ಥಾನದ ಬಳಿಗೆ ಆಗಮಿಸಿತು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಸಿಡಿ ರಣದ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು.
ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಸಿಡಿಗೆ ಹಣ್ಣು ದವನ ಎಸೆದು ಕೊಂಡಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ನೂರಾರು ವರ್ಷಗಳಿಂದ ಪಟ್ಟಣದ ಶಕ್ತಿ ದೇವತೆ ಪಟ್ಟಲದಮ್ಮ ಸಿಡಿ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ಬಾರಿಯೂ ಭಕ್ತರ ನಂಬಿಕೆಗೆ ಚ್ಯುತಿಬಾರದ ರೀತಿಯಲ್ಲಿ ಅಚ್ಚುಕಟ್ಟಾಗಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸಿದ್ದೇವೆ. ಸಕಾಲಕ್ಕೆ ಮಳೆ ಬೆಳೆಯಾಗಿ ನಾಡಿನ ಜನರು ನೆಮ್ಮದಿಯಿಂದ ಬದುಕಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದರು.





