ಮಂಡ್ಯ: ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳತನ ಮಾಡಲು ಬಂದಿದ್ದ ದರೋಡೆಕೋರರ ತಂಡವೊಂದು ಕಳ್ಳತನ ಮಾಡಿದ ದೃಶ್ಯವನ್ನು ನೋಡಿದ ವ್ಯಕ್ತಿಯನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಮಂಡ್ಯ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ.
ಕಿರುಗಾವಲು ಗ್ರಾಮದ ಮಹದೇಶ್ವರ ಹೋಟೆಲ್ ಮಾಲೀಕ ಮಾದಪ್ಪ ಎಂಬುವವರೇ ಕೊಲೆಯಾದ ದುರ್ದೈವಿಯಾಗಿದ್ದಾರೆ.
ಕಳೆದ ತಡರಾತ್ರಿ ಜ್ಯುವೆಲ್ಲರಿ ಅಂಗಡಿಯೊಂದರಲ್ಲಿ ಕಳ್ಳತನ ಮಾಡಲು ಬಂದ ದರೋಡೆಕೋರರ ತಂಡ ಅಂಗಡಿ ಬಾಗಿಲನ್ನು ಗ್ಯಾಸ್ ಕಟರ್‌ನಿಂದ ಕಟ್ ಮಾಡಿ ಒಳನುಗ್ಗಿ ಚಿನ್ನಾಭರಣ ದೋಚುತ್ತಿದ್ದರು.
ಈ ವೇಳೆ ಪಕ್ಕದಲ್ಲಿದ್ದ ಮಹದೇಶ್ವರ ಹೋಟೆಲ್ ಮಾಲೀಕ ಮಾದಪ್ಪ ಅವರು ಶಬ್ದ ಕೇಳಿ ಹೊರಬಂದಿದ್ದಾರೆ. ಇದರಿಂದ ಗಾಬರಿಗೊಂಡ ದರೋಡೆಕೋರರು ಮಾದಪ್ಪ ಅವರ ಮೇಲೆ ಹಲ್ಲೆ ನಡೆಸಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ವಿ.ಕೃಷ್ಣಪ್ಪ ಸೇರಿದಂತೆ ಹಲವು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





