ಮಂಡ್ಯ: ರಕ್ತದಾನ ಎಂಬುವುದು ಎಲ್ಲ ದಾನಕ್ಕಿಂತಲೂ ಮಿಗಿಲಾದದ್ದು, ರಕ್ತದಾನ ಮಾಡಿದರೆ ಬೇರೊಬ್ಬರಿಗೆ ಜೀವದಾನ ಮಾಡಿದಂತೆ. ಆದ್ದರಿಂದ ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ ಮೋಹನ್ ಅಭಿಪ್ರಾಯಪಟ್ಟರು.
ಅವರು ಇಂದು ಮಂಡ್ಯ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ವಿಶ್ವ ರಕ್ತ ದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜನಜಾಗೃತಿ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಎಂಬುವುದು ದಾನಗಳಲ್ಲೇ ಶ್ರೇಷ್ಠವಾದ ದಾನ, ನಿಯಮಿತವಾಗಿ ರಕ್ತದಾನ ಮಾಡುವುದರಿಂದ ಮನುಷ್ಯನು ಆರೋಗ್ಯ ವೃದ್ಧಿಯಾಗುತ್ತದೆ. ರಕ್ತದಾನದಿಂದ ಆರೋಗ್ಯಕ್ಕೆ ತೊಂದರೆಯಾಗುತ್ತದೆ ಎಂಬ ಮನೋಭಾವವನ್ನು ದೂರಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವರ್ಷದ ಘೋಷವಾಕ್ಯವಾದ 20 ವರ್ಷಗಳ ರಕ್ತದಾನ ಸಂಭ್ರಮ, ಧನ್ಯವಾದ ರಕ್ತದಾನಿಗಳಿಗೆ ಎಂಬ ವಾಕ್ಯವನ್ನು ಇಟ್ಟುಕೊಂಡು ಇಂದು ನಾವು ಜನಗಳಿಗೆ ಅರಿವು ಮೂಡಿಸುವುದಕ್ಕೆ ಜನಜಾಗೃತಿ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.
ಆರೋಗ್ಯವಂತ ಯುವಜನತೆಯು ರಕ್ತದಾನ ಮಾಡುವುದರಿಂದ ಅಪಘಾತ,ಶಸ್ತ್ರಚಿಕಿತ್ಸೆ ಯ ಸಂದರ್ಭದಲ್ಲಿ, ಡೆಂಗ್ಯೂ,ರಕ್ತದ ಕೊರತೆ ಇರುವವರಿಗೆ ಬಹಳ ಪ್ರಯೋಜನವಾಗುತ್ತದೆ ಯುವಜನತೆಯು ರಕ್ತದಾನ ಮಾಡುವುದಕ್ಕೆ ಮುಂದೆ ಬನ್ನಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠ ರೋಗ ನಿರ್ಮೂಲನಾಧಿಕಾರಿ ಡಾ.ಸೋಮಶೇಖರ್, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ (ಟಿ.ಎಚ್.ಒ) ಡಾ.ಜವರೇಗೌಡ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಗಾಯಿತ್ರಿ, ಜಿಲ್ಲಾ ಆರೋಗ್ಯ ಇಲಾಖೆಯ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ಮಮತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.