ಮಂಡ್ಯ : ಜಿಲ್ಲೆಯ ಪಾಂಡವಪುರದ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸಲು ಸರ್ಕಾರ ಮುಂದಾಗಿದ್ದು, ರೈತರು ಸಾಕಷ್ಟು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಇಂದು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಇನ್ನು ಸಭೆಯಲ್ಲಿ ಸಚಿವ ಚೆಲುವರಾಯಸ್ವಾಮಿ ಮಾತನಾಡಿ, ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್ ಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಇದು ೨೦೧೮ ರಿಂದ ಇದೆ. ಸಾಕಷ್ಟು ರೈತರು ಟ್ರಯಲ್ ಬ್ಲಾಸ್ಟ್ ಬೇಡ ಎಂದು ಹೇಳಿದ್ದಾರೆ. ಸರ್ಕಾರ ಮತ್ತು ನಮಗೆ ಬೇರೆ ಯಾವ ವಿಶೇಷ ಕಾಳಜಿ ಇಲ್ಲ ನಮಗೆ ಜಲಾಶಯದ ಸುರಕ್ಷತೆ ಮುಖ್ಯ. ಈಗಾಗಲೇ ರೂತರು ನಮ್ಮನ್ನ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ಎಂದು ಹೇಳಿದರು.
ಅಲ್ಲದೆ ಟ್ರಯಲ್ ಬ್ಲಾಸ್ಟ್ ನಡೆಸಿ ವರದಿ ಕೋಡಿ ಎಂದು ಕೋರ್ಟ್ ಸೂಚನೆ ನೀಡಿದೆ. ನಾವು ಕೂಡ ಸಂಪೂರ್ಣ ಮಾಹಿತಿ ಪಡೆಯಲು ಮುಂದಾಗಿದ್ದೇವೆ. ನಾವು ಎಲ್ಲರ ಜೊತೆ ಚರ್ಚೆ ಮಾಡುತ್ತಿದ್ದೇವೆ. ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡಿ ಜುಲೈ ೧೫ ರ ಒಳಗೆ ಕೋರ್ಟ್ ಗೆ ಮನವಿ ಸಲ್ಲಿಸುತ್ತೇವೆ. ಸರ್ಕಾರ ಕೂಡ ಏನು ಮನವಿ ಮಾಡಬೇಕು ಎಂದು ತಿಳಿಸುತ್ತದೆ. ಟ್ರಯಲ್ ಬ್ಲಾಸ್ಟ್ ಅಂತಿಮ ದಿನಾಂಕ ನಿಗದಿ ಮಾಡಿಲ್ಲ. ಸಿಎಂ ಜೊತೆ ಚರ್ಚೆ ಮಾಡಿ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ. ವೈಯಕ್ತಿಯ ಗಣಿಗಾರಿಕೆ ನಮಗೆ ಮುಖ್ಯವಲ್ಲ. ಮತ್ತೊಂದು ಡ್ಯಾಂ ಕಟ್ಟಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಜಲಾಶಯಕ್ಕೆ ಒಂದು ಸಣ್ಣ ಹಾನಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಅಧಿಕಾರಿಗಳು, ರೈತರು ಹಾಗೂ ಶಾಸಕರಾದ ಗಣಿಗ ರವಿಕುಮಾರ್ , ರಮೇಶ್ ಬಂಡಿಸಿದ್ದೇಗೌಡ , ಡಿಸಿ ಡಾ ಕುಮಾರ್ , ಜಿಪಂ ಸಿಇಒ, ಎಎಸ್ಪಿ , ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು, ನೀರಾವರಿ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.