ಮಂಡ್ಯ: ಮಠಾಧೀಶರು ಶೋಷಿತರ ಧ್ವನಿಯಾಗಬೇಕೇ ಹೊರತು ಒಂದು ಜಾತಿಗೆ ಧ್ವನಿಯಾಗುವುದು ಸರಿಯಲ್ಲ. ಮಠಾಧೀಶರು ಜಾತಿ ಹಾಗೂ ಸಮಾಜದ ಹೆಸರಿನಲ್ಲಿ ಮನುಷ್ಯತ್ವವನ್ನು ಕೊಲ್ಲುವ ಕೆಲಸ ಮಾಡಬೇಡಿ ಎಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಮನವಿ ಮಾಡಿದರು.
ಭಾನುವಾರ(ಜೂ.30) ಮಳವಳ್ಳಿಯ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆದಿ ಮಾತನಾಡಿದ ಅವರು, ಈ ಹಿಂದೆ ರಾಜ್ಯದಲ್ಲಿ ಪ್ರಮುಖ ಜಾತಿಯವರೆಲ್ಲ ಮುಖ್ಯಮಂತ್ರಿಯಾಗಿದ್ದಾರೆ. ನಿಜಲಿಂಗಪ್ಪ, ಬೊಮ್ಮಾಯಿ, ವೀರೇಂದ್ರ ಪಾಟೀಲ್, ಯಡಿಯೂರಪ್ಪ, ಬಸವರಾಜು ಬೊಮ್ಮಯಿ ಒಂದು ವರ್ಗಕ್ಕೆ ಸೇರಿದರೆ, ಕಡಿದಾಳ್ ಮಂಜಪ್ಪ, ಕೆಂಗಲ್ ಹನುಮಂತಯ್ಯ, ದೇವೇಗೌಡ, ಸದಾನಂದಗೌಡ, ಕುಮಾರಸ್ವಾಮಿ ಇನ್ನೊಂದು ವರ್ಗಕ್ಕೆ ಸೇರಿದ್ದಾರೆ. ಈ ನಡುವೆ ದೇವರಾಜು ಅರಸು, ಬಂಗಾರಪ್ಪ, ವೀರಪ್ಪ ಮೊಯ್ಲಿ, ಧರ್ಮಸಿಂಗ್, ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಆದರೆ ಬಹುಸಂಖ್ಯಾತ ಜನರು ಒಂದು ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದರೂ ಕೆಲವು ಮಠಾಧೀಶರು ಸಿಎಂ ವಿಚಾರವಾಗಿ ಮಾತನಾಡಿದ್ದಾರೆ. ಮಠಾಧೀಶರು ಶೋಷಿತರ ಧ್ವನಿಯಾಗಬೇಕೇ ಹೊರತು ಯಾವುದೋ ಒಂದು ಜಾತಿಗೆ ಧ್ವನಿಯಾಗುವುದು ಸರಿಯಲ್ಲ ಎಂದರು.
ನಾವು ಮಠಗಳು ಹಾಗೂ ಮಠಾಧೀಶರಿಗೆ ಗೌರವ ಕೊಡುತ್ತೇವೆ. ಮಠಾಧೀಶರನ್ನು ಅನುಸರಿಸುತ್ತಿದ್ದೇವೆ. ಜಾತಿ ಹಾಗೂ ಸಮಾಜದ ಹೆಸರಿನಲ್ಲಿ ಮಠಾಧಿಪತಿಗಳು ಮನುಷ್ಯತ್ವ ಕೊಲ್ಲುವ ಕೆಲಸಕ್ಕೆ ಹೋಗಬೇಡಿ ಎಂದು ಶೋಷಿತ ಸಮಾಜದ ಪ್ರತಿನಿಧಿಯಾಗಿ ನಿಮ್ಮಲ್ಲಿ ನೋವು ತೋಡಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.
ಪಕ್ಷಗಳಲ್ಲಿ ಜಾತಿ ಹೆಸರಿನಲ್ಲಿ ಅಧಿಕಾರಿ ನೀಡುವುದು ಸರಿಯಲ್ಲ. ನಮ್ಮ ಪಕ್ಷಕ್ಕೆ ಹೈಕಮಾಂಡ್ ಮಾತೇ ಅಂತಿಮಾ. ಮಠಾಧೀಶರು ಒಂದು ಪಕ್ಷ, ನಾಯಕ ಹಾಗೂ ಜಾತಿ ಪರ ಮಾತನಾಡುವುದನ್ನ ಬಿಟ್ಟು ಎಲ್ಲಾ ಪಕ್ಷ ಹಾಗೂ ನಾಯಕರಿಗೂ ಆಶೀರ್ವಾದ ಮಾಡಬೇಕು ಎಂದರು.