Mysore
21
scattered clouds

Social Media

ಶುಕ್ರವಾರ, 09 ಜನವರಿ 2026
Light
Dark

ಕಾವೇರಿ ನದಿ ಪಾತ್ರದಲ್ಲಿ ಅಸ್ಥಿ ವಿಸರ್ಜನೆಗೆ ಮಾನದಂಡ ಜಾರಿ

cavery asthi fine

ಮಂಡ್ಯ : ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ಥಿ ವಿಸರ್ಜನೆ ಮಾಡಿ ನದಿ ನೀರು ಮಲಿನಗೊಳಿಸುವುದನ್ನು ತಡೆಗಟ್ಟಲು ನಿಯಮಗಳನ್ನು ರೂಪಿಸಿ ಏಜೆನ್ಸಿಗೆ ಟೆಂಡರ್ ನೀಡಲಾಗಿದೆ. ಸಾರ್ವಜನಿಕರು ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಕುಮಾರ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾವೇರಿ ನದಿ ಪಾತ್ರದಲ್ಲಿ ಅಸ್ಥಿ ವಿಸರ್ಜನೆ ಸೇರಿದಂತೆ ಸ್ನಾನ ಮಾಡಿದ ನಂತರ ಬಟ್ಟೆಗಳನ್ನು ನೀರಿಗೆ ಬಿಸಾಡುವುದು ಸಾಮಾನ್ಯವಾಗಿದೆ. ಕಾವೇರಿ ನದಿ ಪಾತ್ರದಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಲು ಅಸ್ಥಿ ವಿಸರ್ಜನೆಗೆ ದರವನ್ನು ನಿಗದಿಪಡಿಸಿ,ನಿರ್ವಹಣೆ ಜವಾಬ್ದಾರಿಯನ್ನು ಏಜೆನ್ಸಿಗೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಕಾವೇರಿ ನದಿ ಪಾತ್ರದ ಗೋಸಾಯಿ ಘಾಟ್, ಕಾವೇರಿ ಸಂಗಮ, ಪಶ್ಚಿಮ ವಾಹಿನಿ, ಸ್ನಾನಘಟ್ಟ ಸೇರಿದಂತೆ ನಾಲ್ಕು ಸ್ಥಳಗಳಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗುತ್ತಿದೆ. ಈ ಸ್ಥಳಗಳಲ್ಲಿ ಏಜೆನ್ಸಿಯವರು ಸ್ನಾನ ಮಾಡಿದ ನಂತರ ಸಾರ್ವಜನಿಕರಿಗೆ ಬಟ್ಟೆ ಬದಲಾಯಿಸಲು ಕೊಠಡಿಗಳ ವ್ಯವಸ್ಥೆ ಮಾಡಬೇಕು, ನೀರಿನಲ್ಲಿ ಒದ್ದೆಯಾದ ಬಟ್ಟೆಗಳು, ಹೂವು, ಹಣ್ಣು ಇತರೇ ತ್ಯಾಜ್ಯ ರೂಪದ ಪದಾರ್ಥಗಳನ್ನು ವಿಲೇವಾರಿ ಮಾಡಲು ಅಗತ್ಯವಾಗಿ ಬೇಕಾದ ಕಸದ ಬುಟ್ಟಿಗಳನ್ನು ಇಡಬೇಕು. ಇವುಗಳ ಬಗ್ಗೆ ನಿಗಾ ವಹಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಸ್ಥಿ ವಿಸರ್ಜನೆಗೆ ನಿಗದಿಪಡಿಸಿರುವ ಸ್ಥಳಗಳನ್ನು ಹೊರತುಪಡಿಸಿ ಸಾರ್ವಜನಿಕರು ಕಾವೇರಿ ನದಿ ಪಾತ್ರದ ಬೇರೆ ಸ್ಥಳಗಳಲ್ಲಿ ಅಸ್ಥಿ ವಿಸರ್ಜನೆ ಮಾಡದಂತೆ ಅಧಿಕಾರಿಗಳು ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.

ಅಧಿಕಾರಿಗಳು ಕಾವೇರಿ ನದಿ ಪಾತ್ರದಲ್ಲಿ ಅಸ್ಥಿ ವಿಸರ್ಜನೆ ಮಾಡುವ ಅರ್ಚಕರ ಪಟ್ಟಿಯನ್ನು ಸಿದ್ಧಪಡಿಸಿ, ಪುರೋಹಿತರೊಂದಿಗೆ ಸಭೆ ನಡೆಸಿ ಅವರಿಗೆ ಯಾವುದೇ ತ್ಯಾಜ್ಯಗಳನ್ನು ನೀರಿಗೆ ಬಿಸಾಡದಂತೆ ತಿಳುವಳಿಕೆ ನೀಡಿ ಎಂದರು.

ಅಸ್ಥಿ ವಿಸರ್ಜನೆ ಮಾಡುವ ಸ್ಥಳಗಳಲ್ಲಿ ಶೌಚಾಲಯ ವ್ಯವಸ್ಥೆ, ಹಸಿ ಬಟ್ಟೆಗಳು, ತ್ಯಾಜ್ಯಗಳನ್ನು ಬಿಸಾಡಲು ಕುಸದ ಬುಟ್ಟಿ ಇರಿಸಿ, ಸಾರ್ವಜನಿಕರಿಗೆ ತ್ಯಾಜ್ಯಗಳನ್ನು ನೀರಿಗೆ ಎಸೆಯಬಾರದು ಎಂಬುದನ್ನು ಧ್ವನಿ ವರ್ಧಕದ ಮೂಲಕ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.

ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಇಂದು ನಾವು ನಮ್ಮ ಜಲಸಂಪನ್ಮೂಲವನ್ನು ಸಂರಕ್ಷಣೆ ಮಾಡದೆ ಹೋದರೆ, ಮುಂದಿನ ಪೀಳಿಗೆ ನೀರಿಲ್ಲದೆ,ಶುದ್ಧ ಪರಿಸರವಿಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶಾಧಿಕಾರಿ ಟಿ.ಎನ್. ನರಸಿಂಹಮೂರ್ತಿ, ನಗರಾಭಿವೃದ್ಧಿ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರತಾಪ್, ನಗರಸಭೆ ಪೌರಾಯುಕ್ತೆ ಪಂಪಾಶ್ರೀ ಇನ್ನಿತರೆ ಅಧಿಕಾರಿಗಳು ಭಾಗವಹಿಸಿದ್ದರು.

Tags:
error: Content is protected !!