ಶ್ರೀರಂಗಪಟ್ಟಣ: ಐದು ದಿನಗಳ ಕಾಲದ ಶ್ರೀರಂಗಪಟ್ಟಣ ದಸರಾವು ಕಳೆಗಟ್ಟಿದ್ದು, ಭಾನುವಾರ ಮುಂಜಾನೆಯೇ ಶ್ರೀರಂಗಪಟ್ಟಣದ ಶ್ರೀರಂಗನಾಥ ದೇವಾಲಯದ ಎದುರು 80o ಕ್ಕೂ ಅಧಿಕ ಮಂದಿ ಯೋಗಾ ಪಟುಗಳು ಯೋಗಾ ಪ್ರದರ್ಶಿಸಿದರು.
ಶ್ರೀರಂಗಪಟ್ಟಣ ದಸರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಯೋಗದಸರಾದಲ್ಲಿ ಯೋಗ ಪಟುಗಳು ಸಾಮೂಹಿಕ ಸೂರ್ಯ ನಮಸ್ಕಾರ ಮಾಡಿ ಗಮನ ಸೆಳೆದರು.
ಯೋಗ ಪಟುಗಳು, ಸೂರ್ಯ ನಮಸ್ಕಾರ, ಭುಜಂಗಾಸನ, ವಜ್ರಾಸನ, ತಡಾಸನ, ಅರ್ಧಚಕ್ರಾಸನ, ಉಷ್ಟ್ರಾಸನ, ಧನುರಾಸನ, ಶವಾಸನ, ಪ್ರಣಾಯಾಮ, ಧ್ಯಾನ ಸೇರಿದಂತೆ ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಯೋಗ ದಸರಾಗೆ ಚಾಲನೆ ನೀಡಿ ಮಾತನಾಡಿದ ಉಪವಿಭಾಗಾಧಿಕಾರಿ ಶಿವಮೂರ್ತಿ, ಯೋಗದಿಂದ ಮನುಷ್ಯನ ವಯಸ್ಸು ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಪ್ರತಿಯೊಬ್ಬರು ಯೋಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮನುಷ್ಯನ ಶ್ರೀಮಂತಿಕೆ ಆರೋಗ್ಯದಲ್ಲಿದೆ. ಎಷ್ಟೇ ಹಣ, ಆಸ್ತಿ, ಹೆಸರು ಸಂಪಾದಿಸಿದರು ಕೂಡ ಆರೋಗ್ಯ ಭಾಗ್ಯ ಇಲ್ಲವೆಂದರೆ ಎಲ್ಲವೂ ಶೂನ್ಯವಾಗುತ್ತದೆ. ಆರೋಗ್ಯ ವೃದ್ಧಿಸಿಕೊಳ್ಳುವ ವ್ಯಾಯಮ, ಯೋಗದಂತಹ ಚಟುವಟಿಕೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದರು.
ಪ್ರಾಚೀನ ಕಾಲದಿಂದಲೂ ಋಷಿಮುನಿಗಳು ಪ್ರತಿದಿನ ಯೋಗಾಭ್ಯಾಸವನ್ನು ಮಾಡುತ್ತಿದ್ದರು. ಆದರಿಂದ ಅವರು ಅನೇಕ ವರ್ಷಗಳ ಕಾಲ ಅರೋಗ್ಯದಿಂದ ಇರುತ್ತಿದ್ದರು. ಎಲ್ಲರೂ ಕೂಡ ಅವರನ್ನು ಅನುಸರಿಸಿ ಯೋಗವನ್ನು ನಮ್ಮ ಪ್ರತಿನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ಯೋಗ ಭಾರತ ದೇಶದಲ್ಲಿ ಹುಟ್ಟಿ ಇಂದು ಪ್ರಪಂಚದಾದ್ಯಂತ ಪಸರಿಸಿದೆ. ಯೋಗವು ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ 40 ರಿಂದ 45 ನಿಮಿಷಗಳ ಕಾಲ ಯೋಗವನ್ನು ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ರೋಗ ಬಂದ ಮೇಲೆ ವೈದ್ಯರಿಂದ ಚಿಕಿತ್ಸೆ ಪಡೆಯುವುದಕ್ಕಿಂತ ಎಲ್ಲರೂ ಯೋಗ ಅಭ್ಯಾಸ ಮಾಡಿ ರೋಗಗಳು ಬಾರದಂತೆ ನೋಡಿಕೊಳ್ಳುವುದು ಉತ್ತಮ ಸಲಹೆ ನೀಡಿದರು.
ಶ್ರೀರಂಗಪಟ್ಟಣ ತಾಲೂಕಿನ ತಹಶೀಲ್ದಾರ್ ಪರಶುರಾಮ ಮಾತನಾಡಿ, ಕಳೆದ ಎರಡು ದಿನಗಳಿಂದ ಶ್ರೀರಂಗಪಟ್ಟಣ ದಸರಾ ಹಬ್ಬವನ್ನು ಆಚರಿಸುತಿದ್ದೇವೆ. ಅದಕ್ಕೆ ಪೂರಕವಾಗಿ ಇಂದು ಯೋಗ ದಸರಾವನ್ನು ಆಯುಷ್ ಇಲಾಖೆ ಹಾಗೂ ಕ್ರೀಡಾ ಇಲಾಖೆ ಸೇರಿ ಆಯೋಜಿಸಿದ್ದು ಯೋಗ ದಸರಾಗೆ ಶುಭವಾಗಲಿ ಎಂದು ಹಾರೈಸಿದರು.
ಕೆ. ಶೆಟ್ಟಹಳ್ಳಿ ವಿವೇಕಾನಂದ ಯೋಗ ಕಿಶೋರ ಕೇಂದ್ರದ ಯೋಗ ಗುರು ಅಪ್ಪಾಜಿ ಮಾತನಾಡಿ, ಪ್ರತಿಯೊಬ್ಬರೂ ಯೋಗದಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಪ್ರತಿ ಮಕ್ಕಳಲ್ಲಿಯೂ ಸಹ ಯೋಗದ ಅರಿವನ್ನು ಮೂಡಿಸಬೇಕು. ದೇಹ ಸದೃಢವಾಗಿದ್ದರೆ ದೇಶ ಸದೃಢವಾಗಿರುತ್ತದೆ. ಆದ್ದರಿಂದ ಯೋಗದ ಮಹತ್ವವನ್ನು ಎಲ್ಲರೂ ಎಲ್ಲೆಡೆ ಪಸರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಆಯುಷ್ ಫೆಡರೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಾ ಕಲಾದರ್, ಪತಂಜಲಿ ಸಂಸ್ಥೆಯ ಯೋಗ ಶಿಕ್ಷಕ ರವಿ ವಿ. ವಿ, ಯೋಗ ಶಿಕ್ಷಕ ಚಂದ್ರು, ಬಂಡೂರಿನ ಸರಕಾರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯೆ ಶೋಭಾ ಆರ್ ಜೆ ಅವರುಗಳನ್ನು ಸನ್ಮಾನಿಸಲಾಯಿತು.
ಕೈ ಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕ ರಂಗಸ್ವಾಮಿ, ಶ್ರೀರಂಗಪಟ್ಟಣ ಪುರಸಭೆ ಮುಖ್ಯಧಿಕಾರಿ ರಾಜಣ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಎಸ್ ಹೆಚ್, ಎಸ್.ಪಿ.ವೈ. ಎಸ್.ಎಸ್ ನ ಜಿಲ್ಲಾ ಸಂಚಾಲಕ ಶಂಕರ್ ನಾರಾಯಣಶಾಸ್ತ್ರೀ, ಮಂಡ್ಯ ವಿವೇಕಾನಂದ ಯೋಗ ಕೇಂದ್ರದ ಚಂದ್ರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.