ಮಂಡ್ಯ: ವ್ಯಕ್ತಿಯೋರ್ವ ಪ್ರವಾಸಕ್ಕೆಂದು ಬಂದಿದ್ದಾಗ ಫೋಟೋ ತೆಗೆದುಕೊಳ್ಳಲು ಹೋಗಿ ಕಾಲು ಜಾರಿಬಿದ್ದು ಕಾವೇರಿ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಸರ್ವಧರ್ಮ ಆಶ್ರಮದ ಬಳಿ ಈ ಘಟನೆ ನಡೆದಿದ್ದು, ಮೈಸೂರಿನಲ್ಲಿ ಆಟೋ ಚಾಲಕನಾಗಿದ್ದ ಮಹೇಶ್ ಎಂಬುವವರೇ ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ದುರ್ದೈವಿಯಾಗಿದ್ದಾರೆ.
ತನ್ನ ಸ್ನೇಹಿತರೊಂದಿಗೆ ಕೆಆರ್‌ಎಸ್‌ಗೆ ಆಗಮಿಸಿದ್ದ ಮಹೇಶ್, ಸರ್ವಧರ್ಮ ಆಶ್ರಮದ ಬಳಿ ಸೇತುವೆ ಬಳಿ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ಹೋಗಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಆಯತಪ್ಪಿ ನದಿಗೆ ಬಿದ್ದು, ನೋಡ ನೋಡುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕೊಚ್ಚಿ ಹೋಗಿರುವ ಮಹೇಶ್‌ಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.





