Mysore
27
overcast clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಜಾತಿಯತೆ ವಿರುದ್ಧ ಹೋರಾಡಿದ ಸಂತ ಬ್ರಹ್ಮಶ್ರೀ ನಾರಾಯಣಗುರು: ಡಿಸಿ ಕುಮಾರ

ಮಂಡ್ಯ: ಮಹಾನ್ ದಾರ್ಶನಿಕರಾದ ಬ್ರಹ್ಮಶ್ರೀ ನಾರಾಯಣಗುರು ಜಾತಿಯತೆ ವಿರುದ್ಧ ಹೋರಾಡಿದ ಮಹಾನ್‌ ಸಂತ ಎಂದು ಜಿಲ್ಲಾಧಿಕಾರಿ ಡಾ.ಕುಮಾರ್‌ ಹೇಳಿದರು.

ಅವರು ಇಂದು(ಆ.22) ನಗರದ ಗಾಂಧಿಭವನದಲ್ಲಿ ನಡೆದ 2024 – 25ನೇ ಸಾಲಿನ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದರು.

ಯಾವುದೇ ಜಾತಿ, ಧರ್ಮ, ಭೇದಗಳಿಲ್ಲ ನಾವೆಲ್ಲರೂ ಕೂಡ ಮನುಷ್ಯರು ಎಂದು ತಿಳಿಸಿದ ಬ್ರಹ್ಮಶ್ರೀ ನಾರಾಯಣ ಗುರು ಅವರ ತತ್ವ ಹಾಗೂ ಚಿಂತನೆ ನಮ್ಮ ನಡೆ – ನುಡಿಯಲ್ಲಿ ಅಡಗಿರಬೇಕು. ಸಮಾಜದಲ್ಲಿರುವ ಮೂಢನಂಬಿಕೆ, ಅಸ್ಪೃಶ್ಯತೆ, ಮಡಿವಂತಿಕೆಗಳೆಲ್ಲವೂ ಹೋಗಲಾಡುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂಬುದನ್ನು ಪ್ರತಿಪಾದನೆ ಮಾಡಿದ್ದರು ಎಂದರು.

ನಾರಾಯಣ ಗುರುಗಳು ಕೇರಳದಲ್ಲಿ ಹುಟ್ಟಿದ್ದರೂ  ಕೂಡ ಇಡೀ ನಾಡಿನಾದ್ಯಂತ ಅವರ ಆದರ್ಶಗಳು, ಚಿಂತನೆಗಳು ಪಸರಿಸಿದೆ.  ಅವರು ಹಾಕಿಕೊಟ್ಟಂತ ಮಾರ್ಗದರ್ಶನಗಳು  ಇಂದಿಗೂ ಪ್ರಸ್ತುತವಾಗಿದ್ದು, ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಾಡಿಗೆ ಕೊಡುಗೆ ನೀಡಿದ ಎಲ್ಲಾ ಮಹಾತ್ಮರ ಜಯಂತಿಗಳನ್ನು ಸರ್ಕಾರದ ಕಾರ್ಯಕ್ರಮವಾಗಿ ಆಚರಿಸಲಾಗುತ್ತಿದ್ದೂ ಇಂದು ನಾವು ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಆಚರಿಸುತ್ತಿದ್ದೇವೆ. ನಾವು ಕೇವಲ ಜಯಂತಿಯನ್ನು ಆಚರಿಸಿ ಅವರ ಭಾವಚಿತ್ರಕ್ಕೆ ಪೂಜೆ ಮಾಡುವುದಕ್ಕೆ ಸೀಮಿತವಾಗದೆ, ಅವರು ನೀಡಿದಂತಹ ಕೊಡುಗೆಗಳು, ಅವರು ಚಿಂತನೆ ಹಾಗೂ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಬೇಕು ಎಂದು ಹೇಳಿದರು.

ಬ್ರಿಟಿಷರ ಆಳ್ವಿಕೆಯ ಕಾಲಘಟ್ಟದಲ್ಲಿ ಇದ್ದಂತಹ ನಾರಾಯಣ ಗುರುಗಳು ಅಂದಿನ ಸಮಾಜದಲ್ಲಿದ್ದ ಮೂಢನಂಬಿಕೆ, ಅಸ್ಪೃಶ್ಯತೆಯನ್ನು ಧಿಕ್ಕರಿಸಿ ಅವುಗಳನ್ನು ಹೋಗಲಾಡಿಸುವಲ್ಲಿ ಮಹತ್ತರ ಪಾತ್ರವಹಿಸಿದ್ದಾರೆ. ಆದ್ದರಿಂದ ಅವರನ್ನು ಸಾಮಾಜಿಕ ಸುಧಾರಣೆಯ ಹರಿಕಾರ ಎಂದು ಕರೆಯಬಹುದು ಎಂದರು.

ಕರಾವಳಿಯ ಭಾಗಗಳದ ಉಡುಪಿ, ಮಂಗಳೂರು, ಕೇರಳ ಮುಂತಾದ ಭಾಗದಲ್ಲಿ ನಾರಾಯಣ ಗುರುವನ್ನು ಯಾವುದೇ ಜಾತಿ, ಧರ್ಮಗಳ ಹೊರತಾಗಿ ಪ್ರತಿ ಮನೆ, ಬೀದಿಗಳಲ್ಲಿಯೂ ಕೂಡ ಅವರನ್ನು ದೈವ ಸ್ವರೂಪವಾಗಿ ಪೂಜೆಯ ಮೂಲಕ ಆರಾಧಿಸಲಾಗುತ್ತದೆ. ಅದನ್ನ ನಾವು ಅರಿತುಕೊಂಡು ಅವರ ಸಾಧನೆಯನ್ನು ಸ್ಮರಿಸಬೇಕು. ಜೊತೆಗೆ ತಮ್ಮ ಮಕ್ಕಳಿಗೂ ಅವರ ಜೀವನ ಚರಿತ್ರೆಯ ಬಗ್ಗೆ ತಿಳಿಸುವ ಕಾರ್ಯವಾಗಬೇಕು ಎಂದು ಹೇಳಿದರು.

ಮಂಡ್ಯ ವಿಶ್ವವಿದ್ಯಾನಿಲಯ ವಾಣಿಜ್ಯಶಾಸ್ತ್ರದ ಉಪನ್ಯಾಸಕ ಜಿ ವಿ ರಮೇಶ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣಗುರುಗಳು 1856 ಆಗಸ್ಟ್ 20 ರಂದು ಕೇರಳದಲ್ಲಿ ಜನಿಸಿದರು. ನಾರಾಯಣಗುರುಗಳು ಎಂದಿಗೂ ಸಮಯ ವ್ಯರ್ಥ ಮಾಡದೆ ಯೋಗ, ಧ್ಯಾನಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಅಂದಿನ ಕಾಲದ ಅತೀ ಕೆಳ ವರ್ಗದಲ್ಲಿ ಇದ್ದಂತಹ ಕಡು ಬಡತನ ಹಾಗೂ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಪಣತೊಟ್ಟಿದ್ದರು ಎಂದು ಪ್ರತಿಪಾದಿಸಿದರು.

ಕೆಳವರ್ಗದಲ್ಲಿ ಜನಿಸಿದ ನಾರಾಯಣ ಗುರು ಅವರು ಅಂದಿನ ಸಮಾಜದಲ್ಲಿದ್ದ ಎಲ್ಲಾ ರೀತಿಯ ಮೇಲ್ವರ್ಗದ ದೌರ್ಜನ್ಯಗಳ ವಿರುದ್ದ ಹೋರಾಡಿ, ಸಮಾಜದಲ್ಲಿ ಸಮಾನತೆಯನ್ನು ತರುವಲ್ಲಿ ಬಹಳವಾಗಿ ಶ್ರಮಿಸಿದ್ದಾರೆ. ಕೆಳ ವರ್ಗದ ಹೆಣ್ಣುಮಕ್ಕಳ ಮೇಲೆ ಆಗುತ್ತಿದ್ದಂತಹ ಶೋಷಣೆಗಳನ್ನು ಹೋಗಲಾಡಿಸಲು ಪ್ರಮುಖ ಪಾತ್ರ ವಹಿಸಿದವರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಂಡ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ ಬಿ ವಿ ನಂದೀಶ್, ಮೈಶುಗರ್ ಕಾರ್ಖಾನೆಯ ಮಾಜಿ ಅಧ್ಯಕ್ಷ ರಾಮಲಿಂಗಯ್ಯ, ಮಂಡ್ಯ ಜಿಲ್ಲಾ ಆರ್ಯ ಈಡಿಗರ ಸಂಘದ ಗೌರವಾಧ್ಯಕ್ಷ ಡಾ. ಎಂ ವಿ ಸತ್ಯನಾಥ್, ಅಧ್ಯಕ್ಷ ಅಪ್ಪಾಜಿಗೌಡ, ಉಪಾಧ್ಯಕ್ಷರುಗಳಾದ ಹೆಚ್ ದಾಸೇಗೌಡ, ಎಂ ಪಿ ಅರುಣ ಕುಮಾರ್, ಎಂ ವಿ ಪುಟಾಸ್ವಾಮಿ, ಪ್ರಧಾನ ಕಾರ್ಯದರ್ಶಿ ಜಿ ಸಿ ರಾಜ್ ಕುಮಾರ್, ಖಜಾಂಚಿ ಟಿ ಅರವಿಂದ ಕುಮಾರ್, ಸಹಕಾರ್ಯದರ್ಶಿಗಳಾದ ಮಾದೇವ, ಸಿ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಟಿ ಎಸ್ ಶ್ರೀನಿವಾಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: