Mysore
67
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಕಾವೇರಿಗಾಗಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರ ಉರುಳು ಸೇವೆ

ಮಂಡ್ಯ : ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ಹರಿಸುತ್ತಿರುವ ನೀರು ಸ್ಥಗಿತ ಮಾಡಬೇಕು ಹಾಗೂ ಸರ್ವೋಚ್ಚ ನ್ಯಾಯಾಲಯದ ತೀರ್ಪು ಕನ್ನಡಿಗರ ಪರ ಬರಲಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಮಂಡ್ಯದಲ್ಲಿ ಉರುಳು ಸೇವೆ ಮಾಡಿ ಪ್ರತಿಭಟಿಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಉರುಳು ಸೇವೆ ಆರಂಭಿಸಿದ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್ ಗೌಡ, ಯೋಗೇಶ್ ಗೌಡ,ಬೆಂಕಿ ಶ್ರೀಧರ್. ನಾಗಲಕ್ಷ್ಮಿ,ರೋಸಿ,ನಿರ್ಮಲ, ತಸ್ನಿಯ ಬಾನು,ಸೋಮಶೇಖರ್, ಗೋವಿಂದನಾಯಕ್,ಜಯಸಿಂಹ,ಯೇಸು, ರಂಜಿತ್ ಗೌಡ, ಕೃಷ್ಣೇಗೌಡ, ದೇವರಾಜ್ ಉರುಳು ಸೇವೆ ಮಾಡಿದರು.

ಸುಮಾರು ಎರಡು ತಾಸುಗಳ ಕಾಲ ಸರ್ ಎಂ ವಿ ಪ್ರತಿಮೆವರಗೆ ಉರುಳುವ ಮೂಲಕ ಕಾವೇರಿ ವಿಚಾರದಲ್ಲಿ ನ್ಯಾಯಕ್ಕೆ ಒತ್ತಾಯಿಸಿದ ಪ್ರತಿಭಟನಾಕಾರರು ಬೇಕೇ ಬೇಕು ನ್ಯಾಯ ಬೇಕು, ಕಾವೇರಿ ನಮ್ಮದು,ತಕ್ಷಣ ನೀರು ನಿಲ್ಲಿಸಿ,ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯ ದೊರಕಲಿ ಎಂದು ಘೋಷಣೆ ಕೂಗಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ನೀರು ಹರಿಸುತ್ತಿರುವುದನ್ನು ನೋಡಿದರೆ ಮಳೆ ಇಲ್ಲ, ಬೆಳೆ ಇಲ್ಲ. ಮರದಲ್ಲಿ ಗಿಳಿಯೂ ಇಲ್ಲ, ಎಲ್ಲಾ ಮಾಯ, ಎಲ್ಲಾ ಮಾಯ ಮುಂದಿನ ದಿನಗಳಲ್ಲಿ ಕಾವೇರಿ ಕಣಿವೆಯ ಜಮೀನುಗಳಲ್ಲಿ ಎಲ್ಲಾ ಮಾಯ ಎಂದು ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದರು.

ಕೆ ಆರ್ ಎಸ್ ಜಲಾಶಯದಿಂದ ನಿರಂತರವಾಗಿ ನೀರು ಹರಿದು ಹೋಗುತ್ತಿರುವುದರಿಂದ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದಿದೆ, ಇದೇ ರೀತಿ ನೀರು ಬಿಡುತ್ತಿದ್ದರೆ ರೈತರ ಪಾಡೇನು, ರಾಜ್ಯ ಸರ್ಕಾರದ ರೈತರಿಗೆ ದ್ರೋಹ ಮಾಡುತ್ತಿದೆ, ಸರ್ಕಾರದ ಮೇಲಿನ ನಂಬಿಕೆ ಹುಸಿಯಾಗಿದ್ದು, ಸರ್ಕಾರವನ್ನು ನಂಬಿ ಕುಳಿತರೆ ಕುಡಿಯಲು ನೀರು ಸಹ ಸಿಗುವುದಿಲ್ಲ ಎಂದು ಆಕ್ರೋಶಿಸಿದರು.

ಕಾವೇರಿ ಮಾತೆ ಪೂಜಿಸಿದ್ದೇವೆ,ಸುಪ್ರೀಂ ಕೋರ್ಟ್ ನಲ್ಲಿ ಕರ್ನಾಟಕದ ಪರ ತೀರ್ಪು ಬರಲು ಕಾವೇರಮ್ಮ ಕರುಣಿಸಲಿ ಎಂದು ಆಶಿಸಿದರು.

ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ ಮಾತನಾಡಿ, ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲದಂತಾಗಿದೆ, ನಮಗೆ ನೀರು ಇಲ್ಲದ ಮೇಲೆ ತಮಿಳುನಾಡಿಗೆ ಹೇಗೆ ಕೊಡಲು ಸಾಧ್ಯ, ಆದರೆ ರಾಜ್ಯ ಸರ್ಕಾರ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸುತ್ತಿದ್ದಾರೆ, ತಕ್ಷಣ ನೀರು ಸ್ಥಗಿತ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ತಲೆದೂರಿದೆ. ಬೆಳೆದು ನಿಂತಿರುವ ಬೆಳೆ ರೈತರ ಕೈ ಸೇರೋಲ್ಲ,ಹೊಸ ಬೆಳೆ ಹಾಕಲು ನೀರಿಲ್ಲ ವಾಸ್ತವ ಪರಿಸ್ಥಿತಿಯನ್ನ ಅರಿಯಬೇಕಾಗಿದೆ ಎಂದರು.
ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಕರ್ನಾಟಕದ ಮೇಲೆ ಗದ ಪ್ರಹಾರ ಮಾಡಬಾರದು, ಪದೇ ಪದೇ ಸುಪ್ರೀಂ ಕೋರ್ಟ್ ಮೊರೆ ಹೋಗಿ ತಮಿಳುನಾಡು ದಬ್ಬಾಳಿಕೆ ನೀತಿ ಅನುಸರಿಸುತ್ತಿದೆ, ಕೊಡುಕೊಳ್ಳುವ ನೀತಿಗೆ ಮುಖ್ಯಮಂತ್ರಿ ಸ್ಟಾಲಿನ್ ಮುಂದಾಗಬೇಕು, ಕರ್ನಾಟಕದ ಮುಖ್ಯಮಂತ್ರಿ ಜೊತೆ ಮಾತುಕತೆ ನಡೆಸಲು ಮನಸು ಮಾಡಲೇ ಅದನ್ನು ಬಿಟ್ಟು ಹಠ ಮಾರಿ ಧೋರಣೆ ಸರಿಯಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ