Mysore
27
scattered clouds

Social Media

ಸೋಮವಾರ, 05 ಜನವರಿ 2026
Light
Dark

ನಾಗಮಂಗಲ | ಪೊಲೀಸರಿಂದ ಪಥಸಂಚಲನ

ನಾಗಮಂಗಲ : ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತ್ತು ಜನರಲ್ಲಿ ಯಾವುದೇ ಭಯ, ಆತಂಕಗಳು ಮನೆ ಮಾಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪಟ್ಟಣದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಿಂದ ಪಥಸಂಚಲನ ನಡೆಯಿತು.

ಪಟ್ಟಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಕೆ.ಎಸ್.ಆರ್.ಪಿ. ತುಕಡಿ, ಸಶಸ್ತ್ರ ಪಡೆ, ಗೃಹ ರಕ್ಷಕ ದಳ ಸೇರಿದಂತೆ ಸುಮಾರು ೨೫೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸೂಕ್ಷ್ಮ ಪ್ರದೇಶಗಳಾದ ಮಂಡ್ಯ ವೃತ್ತ, ಮೈಸೂರು ರಸ್ತೆ, ಪಡುವಲಪಟ್ಟಣ ರಸ್ತೆ, ಬಡಗೂಡಮ್ಮ ದೇವಾಲಯದ ರಸ್ತೆ, ಸೌಮ್ಯಕೇಶವ ಸ್ವಾಮಿ ದೇವಾಲಯದ ರಸ್ತೆ, ಮರಿಯಪ್ಪ ವೃತ್ತಗಳಲ್ಲಿ ಪಥಸಂಚಲನ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು, ಗಣೇಶ ಉತ್ಸವ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಜನರಲ್ಲಿ ವಿಶ್ವಾಸ ಮೂಡಿಸುವುದರ ಜೊತೆಗೆ ಪೊಲೀಸ್ ಇಲಾಖೆಯು ಹೇಗೆ ಸಿದ್ಧತೆ ಮಾಡಿಕೊಂಡಿದೆ ಎಂಬುದನ್ನು ತಿಳಿಸುವುದು ಈ ಪಥ ಸಂಚಲನ ಪ್ರಮುಖ ಉದ್ದೇಶವಾಗಿದೆ ಎಂದರು.

ಕಳೆದ ವರ್ಷ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಉಂಟಾದ ಗಲಭೆಯಲ್ಲಿ ೫೮ ಜನರನ್ನು ಬಂಧಿಸಲಾಗಿತ್ತು. ೨೮ ಪ್ರಕರಣಗಳನ್ನು ದಾಖಲು ಮಾಡಲಾಗಿತ್ತು. ಆ ಎಲ್ಲಾ ಪ್ರಕರಣಗಳಲ್ಲೂ ತನಿಖೆ ಮುಗಿದು ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸುಮಾರು ೧೮೯ ಜನರ ಮೇಲೆ ಪ್ರಕರಣ ದಾಖಲಾಗಿದ್ದವು. ಅವರೆಲ್ಲರ ಮೇಲೂ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿದ್ದೇವೆ ಎಂದರು.

ಪಥ ಸಂಚಲನದಲ್ಲಿ ಹೆಚ್ಚುವರಿ ಎಸ್‌ಪಿ ತಿಮ್ಮಯ್ಯ, ಡಿವೈಎಸ್‌ಪಿ ಚಲುವರಾಜು, ಸಿಪಿಐ ನಿರಂಜನ್, ಪೊಲೀಸ್ ಇನ್‌ಸ್ಪೆಕ್ಟರ್ ಶಿವಕುಮಾರ್, ಸಿಬ್ಬಂದಿ ಪಾಲ್ಗೊಂಡಿದ್ದರು.

Tags:
error: Content is protected !!