ಮಂಡ್ಯ : ಕಾವೇರಿ ಜಲಾನಯನ ವ್ಯಾಪ್ತಿಯಿಂದ ತಮಿಳುನಾಡಿಗೆ ಒಂದೇ ಒಂದು ತೊಟ್ಟು ನೀರನ್ನು ಹರಿಸಬಾರದು. ಬಿಟ್ಟಿದ್ದೇಯಾದಲ್ಲಿ ಜನರ ಜತೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಮಂಡ್ಯ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗಣಿಗ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟೆಗಳಲ್ಲೇ ನೀರು ಇಲ್ಲದಿದ್ದರೂ ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಆದೇಶಿಸಿರುವುದು ಸರಿಯಲ್ಲ. ತೀರ್ಪು ನೀಡುವ ಮೊದಲು ಇಲ್ಲಿನ ವಾಸ್ತವತೆ ಅರಿಯಬೇಕು. ಆದರೆ, ಪ್ರಾಧಿಕಾರದಲ್ಲಿರುವವರು ಯಾವ ಮಾನದಂಡದ ಮೇಲೆ ತೀರ್ಪು ನೀಡಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.
ಕೆ.ಆರ್.ಎಸ್. ಜಲಾಶಯದಲ್ಲಿ 101 ಅಡಿಗೆ ನೀರು ಕುಸಿದಿದ್ದು, ಇದರಿಂದ ರೈತರು, ಜನ-ಜಾನುವಾರುಗಳಿಗೆ ನೀರಿಲ್ಲವಾಗಿದೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರಾಧಿಕಾರದ ಒತ್ತಾಯಕ್ಕೆ ಮಣಿಯಬಾರದು ಎಂದು ಆಗ್ರಹಿಸಿದರು.
ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲೇ ಹೆಚ್ಚು ನೀರಿದೆ. ನಮ್ಮ ನಾಲ್ಕು ಡ್ಯಾಂಗಳಲ್ಲಿ ನೀರಿಲ್ಲದ ಕಾರಣ ದೀರ್ಘಾವಧಿ ಬೆಳೆಗಳನ್ನು ಹಾಕಬೇಡಿ ಎಂದು ರೈತರಿಗೆ ತಿಳಿಸಿದ್ದೇವೆ. ಅದೇ ರೀತಿ ತಮಿಳುನಾಡಿನವರೂ ಅಲ್ಲಿಯ ರೈತರಿಗೆ ತಿಳಿಸಲಿ. ಅದು ಬಿಟ್ಟು ನಮ್ಮ ಮೇಲೆ ದಬ್ಬಾಳಿಕೆ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಮೇಕೆದಾಟಿಗೆ ಅಡ್ಡಿಪಡಿಸಬಾರದು :ಮಡಿಕೇರಿಯಿಂದ ಹರಿದು ಬರುವ ನೀರಿಗೆ ಅಡ್ಡಲಾಗಿ ಕೆ.ಆರ್.ಎಸ್. ಅಣೆಕಟ್ಟೆ ಕಟ್ಟಲಾಗಿದೆ ಎಂದು ಹೇಳುವ ತಮಿಳುನಾಡಿನವರು, ಅದೇ ರೀತಿ ನಮ್ಮ ಜಿಲ್ಲೆಯಿಂದ ಹರಿದು ಹೋಗುವ ನೀರಿಗೆ ಮೇಕೆದಾಟು ಬಳಿ ಅಣೆಕಟ್ಟು ಕಟ್ಟಲು ವಿರೋಧಿಸದೆ ಸಹಕರಿಸಬೇಕೆಂದರು.
ಬೆಂಗಳೂರಿಗರು ಪ್ರಧಾನಿಗೆ ವಾಟ್ಸಪ್, ಟ್ವಿಟ್ಟರ್ ಮಾಡಲಿ : ಕಾವೇರಿ ನದಿ ನೀರನ್ನು ಹೆಚ್ಚು ಕುಡಿಯಲು ಉಪಯೋಗಿಸುವ ಬೆಂಗಳೂರಿಗರು ಯಾವುದೇ ಹೋರಾಟಕ್ಕೆ ಬರುವುದಿಲ್ಲ. ಬೆಳಗ್ಗೆ ಎದ್ದರೆ ಕಸ, ನಾಯಿಯ ಬಗ್ಗೆ ವಾಟ್ಸಪ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಮಾಡುವ ನೀವು, ಇಲ್ಲಿನ ರೈತರ ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ಕಾವೇರಿ ಪ್ರಾಧಿಕಾರ, ಜಲಸಂಪನ್ಮೂಲ ಸಚಿವರಿಗೆ ವಾಟ್ಸಪ್, ಇನ್‌ಸ್ಟಾಗ್ರಾಂ, ಟ್ವಿಟ್ಟರ್ ಮಾಡಿ. ಇಲ್ಲದಿದ್ದರೆ ಮಾರ್ಚ್ ವೇಳೆಗೆ ನೀವು ಬೀದಿಗೆ ಬರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.