ಮಂಡ್ಯ : ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜಕಾರಣ ಮಾಡುವ ಪ್ರಶ್ನೆಯೇ ಇಲ್ಲ. ರೈತರ ಹಿತರಕ್ಷಣೆ ಮುಖ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್ ಚೆಲುವರಾಯಸ್ವಾಮಿ ತಿಳಿಸಿದರು.
ನಗರದ ಸರ್ ಎಂವಿ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತರ ಹಿತರಕ್ಷಣ ಸಮಿತಿ ನಡೆಸುತ್ತಿರುವ ಧರಣಿ ಸ್ಥಳದಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾಗಿ ಅವರು ಮಾತನಾಡಿದರು,ತಮಿಳುನಾಡು ಪ್ರತಿನಿತ್ಯ 25000 ಕ್ಯೂ ಸೆಕ್ ನೀರು ಬಿಡುಗಡೆ ಮಾಡುವಂತೆ ಪ್ರಾಧಿಕಾರ ಮತ್ತು ನ್ಯಾಯಾಲಯದ ಮೊರೆ ಹೋಗಿದ್ದು,ಕರ್ನಾಟಕ ಸರ್ಕಾರ ಇಲ್ಲಿನ ಪರಿಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಡುತ್ತಾ ಬಂದಿದೆ,ಹಾಗಾಗಿ ನೀರು ಬಿಡುವ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ, ಸರ್ವೋಚ್ಚ ನ್ಯಾಯಾಲಯದಲ್ಲಿ ನಾಳೆ ವಿಚಾರಣೆ ನಡೆಯಲಿ ಇದು ಸರ್ಕಾರ ಸಮರ್ಥ ವಾದ ಮಂಡನೆಗೆ ಮುಂದಾಗಿದೆ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ವಿಶೇಷ ಕಾಳಜಿ ವಹಿಸಿ ಕಾನೂನು ತಜ್ಞರ ಜೊತೆ ನಿರಂತರ ಸಂಪರ್ಕ ಇರಿಸಿಕೊಂಡಿದೆ, ಅದೇ ರೀತಿ ಸಲೆಯ ಸೂಚನೆಗಳನ್ನು ನೀಡುತ್ತಾ ಬರುತ್ತಿದೆ ಎಂದು ಹೇಳಿದರು.
ಸುಪ್ರೀಂ ಕೋರ್ಟಿನ ತೀರ್ಪು ಹೊರ ಬಂದ ನಂತರ ಅನುಕೂಲ ಮತ್ತು ಅನಾನುಕೂಲ ಬಗ್ಗೆ ಸರ್ಕಾರದ ನಿಲುವು ಏನಿರಬೇಕು ಎಂಬುದರ ಬಗ್ಗೆಯೂ ಚರ್ಚೆ ನಡೆದಿದೆ, ರೈತರ ಹಿತ ಕಾಪಾಡಲು ಸರ್ಕಾರ ಎಲ್ಲಾ ರೀತಿಯಲ್ಲಿಯೂ ಮುಂದಾಗಿದೆ ಎಂದು ಹೇಳಿದರು.
ಸರ್ವ ಪಕ್ಷಗಳ ಸಭೆ ಕರೆದು ಚರ್ಚೆ ಮಾಡಿದ್ದೇವೆ, ಸರ್ವ ಪಕ್ಷ ನಿಯೋಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಸಮಯವಕಾಶ ಕೋರಿದ್ದೇವೆ, ಆದರೆ ಅವರು ಇದುವರೆಗೆ ಸಮಯ ನಿಗದಿ ಮಾಡಿಲ್ಲ, ಕಾವೇರಿ ನದಿ ನೀರು ಪ್ರಾಧಿಕಾರ ಕೇಂದ್ರ ಸರ್ಕಾರದ ಅದೀನದಲ್ಲಿ ಕಾರ್ಯನಿರ್ವಣೆ ಮಾಡುತ್ತಿದ್ದು,ಹಾಗಾಗಿ ಪ್ರಧಾನಿಯವರ ಭೇಟಿ ತುರ್ತು ಅಗತ್ಯವಾಗಿದೆ ಎಂದು ಹೇಳಿದರು.
ರಾಜ್ಯದ 28 ಸಂಸದರು, ರಾಜ್ಯಸಭಾ ಸದಸ್ಯರು ಕಾವೇರಿ ವಿಚಾರದಲ್ಲಿ ಒಗ್ಗೂಡಿ ಹೋರಾಟ ಮಾಡಬೇಕಾಗಿದೆ, ಸರ್ವಪಕ್ಷ ನಿಯೋಗ ಪ್ರಧಾನಿಯವರನ್ನು ಭೇಟಿಯಾಗಲು ಅವಕಾಶ ಮಾಡಿಕೊಡಬೇಕಾಗಿದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವಿನ ಸಂಪರ್ಕ ಕೊಂಡಿಯಾಗಿ ಸಂಸದರು ಕಾರ್ಯನಿರ್ವಹಿಸಬೇಕು ಎಂದು ಮನವಿ ಮಾಡಿದ ಅವರು ಕಾವೇರಿ ಸಮಸ್ಯೆ ವಿಚಾರದಲ್ಲಿ ಸಂಸದರಿಗೆ ಪತ್ರ ಬರೆಯುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ಅವರು ಪತ್ರ ಬರೆಯುವುದಾಗಿ ತಿಳಿಸಿದ್ದಾರೆ ಎಂದರು.
ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ನಡೆಸುತ್ತಿರುವ ಹೋರಾಟದಲ್ಲಿ ನ್ಯಾಯಯುತ ಬೇಡಿಕೆ ಮುಂದಿಟ್ಟು ಪ್ರತಿಭಟಿಸಲಾಗುತ್ತಿದೆ ಈ ವೇಳೆ ಯಾರನ್ನು ಸಹ ಟೀಕೆ ಮಾಡದೆ ಹೋರಾಟ ಮುಂದುವರೆಸಿರುವುದು ಒಳ್ಳೆಯ ಬೆಳವಣಿಗೆ,ನಾವು ಕೂಡ ಕಾವೇರಿ ಹೋರಾಟದಲ್ಲಿ ನಿರಂತರವಾಗಿ ಭಾಗಿಯಾಗಿದ್ದೆವು, ಇದೀಗ ಮಂತ್ರಿಯಾಗಿದ್ದೇನೆ, ರಾಜ್ಯವನ್ನಾಳಿದ ಎಲ್ಲಾ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಸಮಸ್ಯೆಯನ್ನು ಎದುರಿಸಿವೆ. ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನಿಗೆ ಸ್ಪಂದಿಸಬೇಕಾಗಿದೆ.ಸರ್ಕಾರ ರೈತರ ಹಿತ ಕಾಪಡಲು ಬದ್ಧವಾಗಿದೆ ಎಂದರು.
ಕೆಆರ್ ಎಸ್ ಜಲಾಶಯದಿಂದ ಕಟ್ಟು ಪದ್ಧತಿಯಲ್ಲಿ ನಾಳೆಯಿಂದ ನಾಲೆಗಳಿಗೆ ಎರಡನೇ ಕಂತಿನ ನೀರು ಹರಿಸಲಾಗುವುದು, ಸಂಕಷ್ಟ ಪರಿಸ್ಥಿತಿಯಲ್ಲಿ ಎಲ್ಲರೂ ಸಹ ಒಗ್ಗೂಡಿ ರೈತರ ರಕ್ಷಣೆಗೆ ಮುಂದಾಗ ಬೇಕಾಗಿದೆ, ಹೋರಾಟದ ಮೂಲಕ ಕೇಂದ್ರ, ರಾಜ್ಯ ಸರ್ಕಾರದ ಗಮನ ಸೆಳೆಯುತ್ತಿದ್ದು.ನಾಡಿನ ರೈತರಿಗೆ ಒಳಿತಾಗಬೇಕಾಗಿದೆ ಎಂದರು.
ಸುನಂದ ಜಯರಾಂ ಮಾತನಾಡಿ ರೈತರಿಂದ ಮತ ಪಡೆದು ಚುನಾಯಿತರಾಗಿರುವ ಸಂಸದರಿಗೆ ಮನವಿ ಮಾಡುವುದು ಸರಿಯಲ್ಲ, ಸಂಕಷ್ಟದಲ್ಲಿರುವ ರೈತರ ನೆರವಿಗೆ ನಿಲ್ಲುವುದು ಅವರ ಕರ್ತವ್ಯ, ನೀವು ಕೂಡ ಸರ್ಕಾರದ ಭಾಗ, ನಾವು ನೀರು ನಿಲ್ಲಿಸಿ ಎಂದು ಹೋರಾಟ ಮಾಡುತ್ತಿದ್ದೇವೆ ಅದಕ್ಕೆ ಸರ್ಕಾರ ಸ್ಪಂದಿಸಿಲ್ಲ ಎಂದು ಹೇಳಿದರು.
ರೈತರು ಬೆಳೆದಿರುವ ಬೆಳೆಗೆ ನೀರಿಲ್ಲ. ಹೊಸ ಬೆಳೆ ಹಾಕಲು ಸಾಧ್ಯವಾಗುತ್ತಿಲ್ಲ. ಇದೊಂದೇ ಬೆಳೆಯಲ್ಲ ಮುಂದಿನ ಎರಡು ವರ್ಷಗಳ ಕಾಲ ರೈತನಿಗೆ ಬೆಳೆ ಹಾಕುವುದು ಅಸಾಧ್ಯ,ಇಂತಹ ಪರಿಸ್ಥಿತಿಯಲ್ಲಿ ರೈತನ ಬದುಕು ಸಂಕಷ್ಟಕ್ಕೆ ಸಿಲುಕಲಿದೆ, ಸರ್ಕಾರ ರೈತರ ರಕ್ಷಣೆಗೆ ಮುಂದಾಗಬೇಕು ಎಂದರು.
ಕಾವೇರಿ ಕೊಳ್ಳದ ಪ್ರದೇಶದಲ್ಲಿ ಎಷ್ಟೇ ಪ್ರತಿಭಟನೆ ಮಾಡಿದರು ನ್ಯಾಯಾಲಯ ಅದನ್ನು ಪರಿಗಣಿಸುವುದಿಲ್ಲ. ಕರ್ನಾಟಕ ಸರ್ಕಾರ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡುವ ಮೂಲಕ ರಾಜ್ಯದ ರೈತರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿದೆ ಎಂದು ಹೇಳಿದರು.
ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ್ ಇತರರಿದ್ದರು.