Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ನಾಗಮಂಗಲ: ನೂತನ ಬಸ್‌ ಸಂಚಾರಕ್ಕೆ ಚಾಲನೆ

ನಾಗಮಂಗಲ: ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಮತ್ತಷ್ಟು ಸೇವೆ ನೀಡುವ ಉದ್ದೇಶದಿಂದ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಹಲವೆಡೆ ಬಸ್ ಸೇವೆಗಳನ್ನು ಆರಂಭ ಮಾಡಿರುವುದಾಗಿ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ 5 ಹೊಸ ಸಾರಿಗೆ ಬಸ್ ಸೇವೆಗಳ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವರು, ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಶಕ್ತಿ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ತುಂಬಾ ಅನುಕೂಲವಾಗಿದೆ. ಇದರಿಂದ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೂ ಸಾಕಷ್ಟು ಲಾಭವಾಗಿದೆ. ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಜತೆಗೆ ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೂತನ ಬಸ್‌ಗಳನ್ನು ಹೊಸ ಮಾರ್ಗಗಳಿಗೆ ವಿಸ್ತರಿಸಲಾಗಿದೆ. ಜನರು ಇದರ ಅನುಕೂಲ ಪಡೆದುಕೊಳ್ಳಬೇಕು ಎಂದರು.

ಈ ಹಿಂದೆ ತಾವು ಸಚಿವರಾಗಿದ್ದ ಅವಧಿಯಲ್ಲಿ ತಾಲೂಕಿಗೆ ಕೆಎಸ್‌ಆರ್‌ಟಿಸಿ ಬಸ್ ಡಿಪೋ ತರಲಾಯಿತು. ಇದರಿಂದಾಗಿ ತಾಲೂಕಿನ ಗ್ರಾಮೀಣ ಪ್ರದೇಶ ಸೇರಿದಂತೆ ಹಲವು ಭಾಗಗಳಿಗೆ ಬಸ್‌ಗಳು ಓಡಾಡುವಂತಾಯಿತು. ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಮತ್ತು ಸಾಗಾಣಿಕೆಗೆ ಅನುಕೂಲವಾಗಿದೆ. ಈಗ 5 ಹೊಸ ಬಸ್‌ಗಳು ನೂತನ ಮಾರ್ಗಗಳಲ್ಲಿ ಸಂಚರಿಸುವಂತೆ ಕ್ರಮವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಶಾಲಾ ಕಾಲೇಜು ಮಕ್ಕಳ ಹಿತದೃಷ್ಠಿಯಿಂದ ಮತಷ್ಟು ಬಸ್ ಸೇವೆಗಳನ್ನು ಒದಗಿಸಲಾಗುವುದು ಎಂದರು.

ನೂತನ ಬಸ್ ಮಾರ್ಗ : ನಾಗಮಂಗಲ-ಮೈಸೂರು ಹಾಗೂ ನಾಗಮಂಗಲ-ಬೆಂಗಳೂರಿನ ಶ್ರೀನಗರ ಮಾರ್ಗಕ್ಕೆ ತಡೆರಹಿತ, ನಾಗಮಂಗಲದಿಂದ ಕೆ.ಆರ್.ಪೇಟೆ, ಪಾಂಡವಪುರ ಮತ್ತು ಮಳವಳ್ಳಿ ಮಾರ್ಗಗಳಿಗೆ ಎಕ್ಸ್ಪ್ರೆಸ್ ಬಸ್ ಸೇವೆಗೆ ಸಚಿವರು ಚಾಲನೆ ನೀಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಪುರಸಭೆ ಅಧ್ಯಕ್ಷ ಅಲೀ ಅನ್ಸರ್‌ಪಾಷ, ಉಪಾಧ್ಯಕ್ಷೆ ವಸಂತಲಕ್ಷ್ಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ತಾಪಂ ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಅಲ್ಪಹಳ್ಳಿ ಡಿ.ಕೃಷ್ಣೇಗೌಡ, ಬಗರ್ ಹುಕುಂ ಸಾಗುವಳಿ ಸಮಿತಿ ಸದಸ್ಯ ಎಂ.ನಾಗರಾಜಯ್ಯ, ಮುಖಂಡರಾದ ಸಂಪತ್, ಚಂದ್ರಶೇಖರ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಬಿ.ನಾಗರಾಜು, ವಿಭಾಗೀಯ ಸಂಚಲನಾಧಿಕಾರಿ ಪರಮೇಶ್ವರಪ್ಪ, ವಿಭಾಗೀಯ ಯಾಂತ್ರಿಕ ಅಭಿಯಂತರ ಚಿನ್ನಚಂಚಯ್ಯ, ಘಟಕ ವ್ಯವಸ್ಥಾಪಕ ಮಹೇಶ್ ಸೇರಿದಂತೆ ಹಲವರು ಇದ್ದರು.

Tags: