ಮಂಡ್ಯ : ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಪೊಲೀಸ್ ಠಾಣೆ ವ್ಯಾಪ್ತಿ ಸೇರಿದಂತೆ ವಿವಿಧೆಡೆ ಸರಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬೆಳ್ಳೂರು ಪೊಲೀಸರು ಬಂಧಿಸಿದ್ದು, ಆರೋಪಿಯಿಂದ ೭ ಲಕ್ಷ ರೂ. ಮೌಲ್ಯದ ೬೯ ಗ್ರಾಂ ತೂಕದ ಚಿನ್ನದ ಸರ ವಶಪಡಿಸಿಕೊಂಡಿದ್ದಾರೆ.
ಗಾರೆ ಕೆಲಸ ಮತ್ತು ತಲೆ ಕೂದಲು ವ್ಯಾಪಾರ ಮಾಡುತ್ತಿದ್ದ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಭೂತೇಶ್ವರ ನಗರ (ಭೂತಪ್ಪನಗುಡಿ)ದ ತಿಪ್ಪೇಶ ಅಲಿಯಾಸ್ ಭರತ್ ಬಿನ್ ಹನುಮಂತಪ್ಪ (೩೩) ಬಂಽತ ಆರೋಪಿ.
ಆ.೧೫ರಂದು ಬೆಳಿಗ್ಗೆ ೧೦.೩೦ರ ಸಮಯದಲ್ಲಿ ನಾಗಮಂಗಲ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದ ಕಿರಣ್ ಕುಮಾರ್ ಎಂಬವರು ತನ್ನ ಬೈಕ್‌ನಲ್ಲಿ ಬೆಳ್ಳೂರು ಕ್ರಾಸ್ ಕಡೆಗೆ ಬರುತ್ತಿದ್ದಾಗ ಸಮೃದ್ಧಿ ಹೋಟೆಲ್ ಎದುರು ಹಿಂದಿನಿಂದ ಬಂದ ಬೈಕ್ ಸವಾರ ಕತ್ತಿನಲ್ಲಿದ್ದ ಸುಮಾರು ೩೦ ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಹೋಗಿರುತ್ತಾನೆಂದು ದೂರು ನೀಡಿದ್ದರು.
ಈ ಪ್ರಕರಣದ ಆರೋಪಿತರ ಪತ್ತೆಗೆ ನಾಗಮಂಗಲ ವೃತ್ತ ಸಿಪಿಐ ನಿರಂಜನ ಕೆ.ಎಸ್.ಬೆಳ್ಳೂರು ಠಾಣಾ ಪಿ.ಎಸ್.ಐ ವೈ.ಎನ್.ರವಿಕುಮಾರ್, ಸಿಬ್ಬಂದಿಗಳಾದ ಪ್ರಶಾಂತ್ ಕುಮಾರ್, ಇಂದ್ರಕುಮಾರ್, ಮಧುಕುಮಾರ್, ರವಿಕಿರಣ್, ಲೋಕೇಶ್, ಸಿಪಿಸಿಯರವರಾದ ಶಂಕರ್‌ನಾಯ್ಕ, ದಿನೇಶ, ಕಿರಣ್ ಕುಮಾರ್, ಪ್ರಕಾಶ್, ಸಿದ್ದಪ್ಪ ಅರವನ್ನೊಗಳಗೊಂಡ ತಂಡ ರಚನೆ ಮಾಡಲಾಗಿತ್ತು.
ಈ ತಂಡ ಆ.೨೮ರಂದು ಮಧ್ಯಾಹ್ನ ೪ ಗಂಟೆ ಸಮಯದಲ್ಲಿ ನಾಗಮಂಗಲ ತಾಲ್ಲೂಕು ಚಂದ್ರಶೇಖರಪುರ ಗ್ರಾಮದ ಹತ್ತಿರವಿದ್ದ ಆರೋಪಿಯನ್ನು ಬಂಧಿಸಿದೆ. ಅಲ್ಲದೆ, ಆತ ಕೃತ್ಯವೆಸಗಲು ಬಳಸಿದ ಬೈಕನ್ನು ವಶಕ್ಕೆ ಪಡೆದಿದೆ. ಈತ ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಸರಗಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.
ಬೆಳ್ಳೂರು ಪೊಲೀಸ್ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಮಂಡ್ಯ ಜಿಲ್ಲಾ ಪೊಲೀಸ್ ಅಧಿಕ್ಷಕ ಮಲ್ಲಿಕಾರ್ಜುನ ಬಾಲದಂಡಿ ಶ್ಲಾಘಿಸಿದ್ದಾರೆ.





